ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ಕೀಯಲ್ ಕೇರಿಯಲ್ಲಿರುವ ಮಂಜಾಟ್ ಗಿರಿಜನ ಕಾಲೋನಿ ಯಲ್ಲಿ ದಾಂದಲೆ ಮಾಡಿದ ಕಾಡಾನೆಗಳ ಹಿಂಡು ರಸ್ತೆಯಲ್ಲಿ ನಿಲ್ಲಿಸಿದ ಎರಡು ಆಟೋ ಹಾಗೂ ಒಂದು ಬೈಕ್ ಅನ್ನು ತುಳಿದು ಪುಡಿಗಟ್ಟಿವೆ. ಇದರಲ್ಲಿ ಪರಿಶಿಷ್ಟ ವರ್ಗದ ಕೀಯಲ್ ಕೇರಿ ನಿವಾಸಿ ಕೆ.ಕೆ ಅರ್ಜುನ ಅವರಿಗೆ ಸೇರಿದ ಆಟೋ ಹಾಗೂ ಕೆ. ಪಿ ಪೂವಯ್ಯ ಅವರ ಆಟೋ ಗಳನ್ನು ಕಾಡಾನೆಗಳು ಬೀಳಿಸಿವೆ. ತುಳಿದು ತೀವ್ರ ನಷ್ಟಪಡಿಸಿವೆ. ಸ್ಥಳೀಯ ನಿವಾಸಿ ಪಿ.ಎ೦. ಪೂಣಚ್ಚ ಅವರ ಬೈಕು ಕೂಡ ಕಾಡಾನೆಗಳ ದಾಳಿಗೊಳಗಾಗಿದೆ.
ಇದರಿಂದ ಗ್ರಾಮದಲ್ಲಿ ಜೀವ ಭಯದ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಬೊಟ್ಟೋಳಂಡ, ಮೂವೇರಾ, ತೆಕ್ಕ ಬೊಟ್ಟೋಳಂಡ ಕುಟುಂಬ ಸೇರಿದಂತೆ ಇನ್ನಿತರ ಬೆಳೆಗಾರರ ಬತ್ತದ ಗದ್ದೆ ಹಾಗೂ ತೋಟಗಳಿಗೆ ನಿರಂತರ ದಾಳಿ ಮಾಡುತ್ತಿರುವುದರಿಂದಾಗಿ ಬಾರಿ ನಷ್ಟಗಳು ಸಂಭವಿಸಿದೆ.
ಇದೀಗ ಕಾಫಿ ಕೊಯ್ಲಿನ ಸಮಯವಾಗಿರುವುದರಿಂದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.ಮಾತ್ರವಲ್ಲದೆ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೀವ್ರ ಸಮಸ್ಯೆ ಉಂಟಾಗಿದ್ದು ಗ್ರಾಮದಲ್ಲಿ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ.
ಮೂರು ವರ್ಷಗಳ ಹಿಂದೆ ಮಂಜಾಟ ಕಾಲೋನಿ ನಿವಾಸಿ ಪಾಲೆರ ಅಪ್ಪಣ್ಣ ಆನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಮೂರು ತಿಂಗಳ ಹಿಂದೆ ನೆಲಜಿ ಗ್ರಾಮದ ಮಾಜಿಯೋಧ ಅಪ್ಪಚಿರ ಹ್ಯಾರಿ ತೋಟದಿಂದ ಹಿಂತಿರುಗುವಾಗ ಕಾಡಾನೆ ದಾಳಿ ಮಾಡಿದ್ದು ಜೀವಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಲ್ಲಿಯ ಅಪ್ಪಚ್ಚಿರ ಹ್ಯಾರಿ ಎಂಬವರ ಮೇಲೆ ದಾಳಿ ಮಾಡಿದ ಕಾಡಾನೆಗಳಿಂದಾಗಿ ಜೀವಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ.ಈ ಬಗ್ಗೆ ಕ್ಷೇತ್ರದ ಶಾಸಕರು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಉಪಟಳವನ್ನು ನಿಯಂತ್ರಿಸಲು ಹಾಗೂ ಸೂಕ್ತ ನಷ್ಟ ಪರಿಹಾರವನ್ನು ಒದಗಿಸಬೇಕೆಂದು ಗ್ರಾಮಸ್ಥರಾದ ಬೊಟ್ಟೋಳಂಡ ಸರಿ ಮೆದಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.