ಕ್ಷೇತ್ರದ ಜನ ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸುವೆ: ಸಂಸದ ಸಾಗರ್ ಖಂಡ್ರೆ

KannadaprabhaNewsNetwork |  
Published : Oct 09, 2024, 01:34 AM IST
ಚಿತ್ರ 8ಬಿಡಿಆರ್51 | Kannada Prabha

ಸಾರಾಂಶ

ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸದ ಸಾಗರ್ ಖಂಡ್ರೆ ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್ ಲೋಕಸಭಾ ಕ್ಷೇತ್ರದ ಜನ ಚಿಕ್ಕ ವಯಸ್ಸಿನಲ್ಲೇ ನನಗೆ ಗುರುತರ ಜವಾಬ್ದಾರಿ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಸರ್ವ ಪ್ರಯತ್ನ ಮಾಡುವೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.

ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲರ ಮಾರ್ಗದರ್ಶನದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವೆ. ಜನರ ಏನೇ ಸಮಸ್ಯೆಗಳಿದ್ದರೂ ಸ್ಪಂದಿಸುವೆ ಎಂದು ತಿಳಿಸಿದರು. ಗುರುವಿನ ಬಲವಿದ್ದರೆ ಏನನ್ನಾದರೂ ಸಾಧಿಸಬಹುದು. ಹೀಗಾಗಿ ಎಲ್ಲರೂ ಗುರುವಿನ ಕೃಪೆಗೆ ಪಾತ್ರರಾಗಬೇಕು. ಹಾವಗಿಲಿಂಗೇಶ್ವರ ಶಿವಾಚಾರ್ಯರು ಸಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ ಎಂದರು.ಅಧಿಕಾರ ವಹಿಸಿಕೊಂಡು 12 ವರ್ಷ ಪೂರ್ಣಗೊಳಿಸಿದ ಪ್ರಯುಕ್ತ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ಗುರು ವಂದನೆ ಸಲ್ಲಿಸಲಾಯಿತು. ಲಾಡಗೇರಿಯ ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್‌ಸಿಂಗ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ದತ್ತಾತ್ರಿ ಪಾಟೀಲ, ಮಂಜುನಾಥ ಪಾಟೀಲ, ಶಿವಕುಮಾರ ಪಾಟೀಲ ತೇಗಂಪುರ, ಘಾಳೆಪ್ಪ ನಾಗೂರೆ, ಗೋರಕನಾಥ ಶ್ರೀಮಾಳೆ, ಮಹೇಶ ಪಾಟೀಲ, ನವನಾಥ ಪಾಟೀಲ, ಮೋಹನ್ ಡಾಂಗೆ, ಮಹಾರುದ್ರ ದೊಡ್ಡಿ, ಮಾರುತಿ ಸೂರ್ಯವಂಶಿ, ಬ್ರಿಜ್‌ಪಾಲ್‌ಸಿಂಗ್(ಪಿಂಟು ಠಾಕೂರ್) ವೇದಿಕೆಯಲ್ಲಿದ್ದರು. ಭಕ್ತರ ಸಹಕಾರದಿಂದ ಮಠದ ಅಭಿವೃದ್ಧಿ:

ಭಕ್ತರ ಸಹಕಾರದಿಂದಲೇ ರಾಚೋಟೇಶ್ವರ ಸಂಸ್ಥಾನ ಮಠವನ್ನು ಮಾದರಿಯಾಗಿ ರೂಪಿಸಲು ಸಾಧ್ಯವಾಗಿದೆ ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು. 12 ವರ್ಷ ಹಿಂದೆ ಮಠದ ಅಧಿಕಾರ ವಹಿಸಿಕೊಂಡಿದ್ದೆ. ಮಠದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಿದರು. ನನ್ನನ್ನು ಪ್ರೀತಿ, ಗೌರವದಿಂದ ನೋಡಿಕೊಂಡರು. ಗುರು-ಶಿಷ್ಯ ಸಂಬಂಧ ಗಟ್ಟಿಗೊಳಿಸಿದರು ಎಂದು ತಿಳಿಸಿದರು.

ಮನೆಗೊಬ್ಬರು ಹಿರಿಯರು ಇದ್ದರೆ ಮನೆಯ ಎಲ್ಲ ಕೆಲಸ ಕಾರ್ಯಗಳು ಸುರುಳಿತವಾಗುತ್ತವೆ. ಹಾಗೆಯೇ ಊರಿಗೊಂದು ಮಠವಿದ್ದರೆ ಭಕ್ತರಿಗೆ ಒಳ್ಳೆಯ ಸಂಸ್ಕಾರ ಸಿಗುತ್ತದೆ. ಪ್ರಸ್ತುತ ಮಾನವ ಮಾನವನಾಗಿ ಬದುಕುವುದನ್ನು ಕಲಿಯಬೇಕಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಪಂಚಾಯಿತಿ ಸದಸ್ಯರು ಹಾಗೂ ಭಕ್ತರು ಗುರು ವಂದನೆ ಹಮ್ಮಿಕೊಂಡು ಗೌರವಿಸಿದ್ದರಿಂದ ಹೃದಯ ತುಂಬಿ ಬಂದಿದೆ. ಭಕ್ತರು ಹಾಗೂ ಸಮಾಜಕ್ಕಾಗಿಯೇ ಬದುಕು ಮುಡುಪಾಗಿಟ್ಟಿರುವೆ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ