ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮುಂದಿನ ತಿಂಗಳು ರಾಜ್ಯ ಸರ್ಕಾರದ ಸಚಿವ ಸಂಪುಟ ಪುನಾರಚನೆಯಾಗಲಿದ್ದು ಆಗ ನನಗೆ ಸಚಿವ ಸ್ಥಾನ ಸಿಗಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ನಂತರ ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಪುನಾಚರನೆಯಾಗಬಹುದು. ಆಗ ನನಗೂ ಸಚಿವನಾಗುವ ಅವಕಾಶ ಸಿಗಲಿದೆ ಎಂದರು.ಬಲಗೈ ಸಮುದಾಯಕ್ಕೆ ಸ್ಥಾನ
ಈ ಹಿಂದೆಯೇ ಹೈಕಮಾಂಡ್ ನನಗೆ ಭರವಸೆ ನೀಡಿತ್ತು, ಅದರಂತೆ ಹೈಕಮಾಂಡ್ ನಡೆದುಕೊಳ್ಳಲಿದೆ, ದಲಿತ ಬಲಗೈ ಸಮುದಾಯ ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿದ್ದರೂ ಸಹ ಟಿ.ಚನ್ನಯ್ಯ ನಂತರ 50 ವರ್ಷಗಳಿಂದ ಕೋಲಾರದಲ್ಲಿ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ.ಈ ಕೊರತೆಯನ್ನು ಈ ಬಾರಿ ನಾನು ತುಂಬಲಿದ್ದೇನೆ ಎಂದರು.ಕೋಲಾರ ಜಿಲ್ಲೆಯಲ್ಲಿ ೬ ವಿಧಾನಸಭೆ ಕ್ಷೇತ್ರಗಳಲ್ಲಿ ೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಸಹ ಜಿಲ್ಲೆಯವರಿಗೇ ಸಚಿವ ಸ್ಥಾನ ನೀಡಿಲ್ಲ, ಕಳೆದ ಬಾರಿ ಸಹ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡದೆ ಹೊರಗಿನವರಿಗೆ ನೀಡಿದ್ದರು. ಇದರಿಂದ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ನೀಗಿಸಲು ಕಷ್ಟವಾಗಿದೆ, ಹೊರಗಿನವರಿಗೆ ಉಸ್ತುವಾರಿ ನೀಡಿದರೆ ಸಮಸ್ಯೆಗಳಿಗೆ ಪರಿಹಾರ ದೂರದ ಮಾತು ಎಂದು ಅವರು ಹ್ಳಿದರು.ಈ ಬಾರಿ ಅವಕಾಶ ಸಿಗುವ ವಿಶ್ವಾಸ
ಜಿಲ್ಲೆಯ ಶಾಸಕರನ್ನು ಮಂತ್ರಿ ಮಾಡಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ನೀಗಿಸಲು ಸಹಕಾರಿಯಾಗಲಿದೆ. ಹೈಕಮಾಂಡ್ ಮೇಲೆ ನನಗೆ ನಂಬಿಕೆ ಇದೆ ಈ ಬಾರಿಯ ಸಚಿವ ಸಂಪುಟ ಪುನಾಚರನೆ ವೇಳೆ ಮೂರು ಬಾರಿ ಶಾಸಕನಾಗಿರುವ ನನಗೆ ಹಾಗೂ ಜಿಲ್ಲೆಯ ಏಕೈಕ ಹಿರಿಯ ಶಾಸಕನಾಗಿದ್ದು ಸಿದ್ದರಾಮಯ್ಯ ಜೊತೆ ಕೆಲಸ ಮಾಡಲು ಅವಕಾಶ ದೊರೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯ ಜನರೂ ಸಹ ಹೊರಗಿನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡದೆ ಸ್ಥಳಿಯರಿಗೇ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ, ಈಗಿನ ಉಸ್ತುವಾರಿ ಸಚಿವ ಬೈರತಿ ಸುರೇಶ್ ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಸೀಮಿತವಾಗಿದ್ದು ಅವರನ್ನು ಕಾಣಬೇಕಾದರೆ ಬೆಂಗಳೂರಿಗೆ ಹೋಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಂಪುಟ ಪುನಾರಚನೆ ವದಂತಿ
ಎರಡೂವರೆ ವರ್ಷಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಗಲೇ ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂಬ ವಾತಾವರಣ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಕೈತಪ್ಪಿತು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿ, ಎರಡೂವರೆ ವರ್ಷಗಳ ನಂತರ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಭರವಸೆ ನೀಡಿತ್ತು. ಅದರಂತೆ ಈಗ ಸಂಪುಟ ಪುನಾರಚನೆ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಸಹ ಯಾವುದೇ ಸಮಯದಲ್ಲಿ ಸಂಪುಟ ಪುನಾರಚನೆಯಾಗಬಹುದು ಎಂದು ಸುಳಿವು ನೀಡಿರುವುದು ಶಾಸಕರ ಮಂತ್ರಿ ಕನಸಿಗೆ ಮತ್ತೆ ಜೀವ ಬಂದಿದೆ.