
ಕಾಮಗಾರಿ ಮುಂದುವರಿಸಲು ಟೆಂಡರ್ ಆಹ್ವಾನ । ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ₹2 ಕೋಟಿ, ಶಾಸಕ ಎಚ್.ಡಿ.ತಮ್ಮಯ್ಯ ₹1 ಕೋಟಿ ಅನುದಾನ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕೋವಿಡ್ 19 ಸೋಂಕು ಇದೀಗ ಮುಕ್ತವಾಗಿದೆ. ಆದರೆ, ಕೋವಿಡ್ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣಕ್ಕೆ ತಗುಲಿನ ಕೋವಿಡ್ ಕರಿ ನೆರಳಿನ ಸೋಂಕು ಮಾತ್ರ ಇನ್ನೂ ಮುಕ್ತವಾಗಿಲ್ಲ.ಹೌದು, ಖೇಲೋ ಇಂಡಿಯಾ ಯೋಜನೆಯಡಿ ಸುಮಾರು ₹6.75 ಕೋಟಿ ವೆಚ್ಚದಲ್ಲಿ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದ ಅಭಿವೃದ್ಧಿಗೆ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಯೋಜನೆ ರೂಪಿಸಿತ್ತು. ಮಹಾರಾಷ್ಟ್ರ ಮೂಲದ ಗುತ್ತಿಗೆದಾರರು ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದರು. ಅಲ್ಪ ಪ್ರಮಾಣದ ಕಾಮಗಾರಿ ನಡೆಸಿದ ಗುತ್ತಿಗೆದಾರ ಸುಮಾರು ₹50 ಕೋಟಿ ಹಣ ಪಡೆದು ಕಾಣೆಯಾದ. ಅಲ್ಲಿಂದ ಕಾಮಗಾರಿಗೆ ಹಿಡಿದ ಗ್ರಹಣ ಬರೋಬ್ಬರಿ ಐದಾರು ವರ್ಷ ಕಳೆದರೂ ಬಿಟ್ಟಿಲ್ಲ.ಸುಮಾರು 13 ಎಕರೆ ವಿಶಾಲ ಜಾಗದಲ್ಲಿ ಕ್ರೀಡಾಂಗಣ ಸೇರಿದಂತೆ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಗೆ ಸಂಬಂಧಿಸಿದ ಅಥ್ಲೆಟಿಕ್ ಕ್ರೀಡಾಂಗಣವಿದೆ. ಈ ಪೈಕಿ ಸುಮಾರು 8 ಎಕರೆ ಪ್ರದೇಶದ ಕ್ರೀಡಾಂಗಣ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ₹7.50 ಕೋಟಿ ಮಂಜೂರಾಗಿತ್ತು. ಮೊದಲ ಹಂತದಲ್ಲಿ ಶೇ,50 ರಷ್ಟು ಅನುದಾನ ಬಿಡುಗಡೆಯಾಗಿತ್ತು. ಆದರೆ, ಗುತ್ತಿಗೆದಾರ ಮಾಡಿದ ಎಡವಟ್ಟಿನಿಂದ ಇಡೀ ಕ್ರೀಡಾಂಗಣ ಇದೀಗ ಕಾನನವಾಗಿ ಮಾರ್ಪಟ್ಟಿದೆ.ರನ್ನಿಂಗ್ ಟ್ರ್ಯಾಕ್ ಜಲ್ಲಿ ಕಲ್ಲು: ಸುಮಾರು 500 ಮೀಟರ್‌ನಿಂದ 800 ಮೀಟರ್ ನಷ್ಟು ರನ್ನಿಂಗ್ ಟ್ರಾಕ್ ಇದ್ದು, ಈ ಟ್ರಾಕ್‌ಗೆ ದೊಡ್ಡ ಜಲ್ಲಿಗಳನ್ನು ಹಾಕಲಾಗಿದೆ. ಆ ಜಲ್ಲಿಗಳ ಮೇಲೆ ರೋಲಿಂಗ್ ಮಾಡಿಲ್ಲ. ಹೀಗಾಗಿ, ಜಲ್ಲಿ ಕಲ್ಲು ಹಾಕಿ ಐದು ವರ್ಷ ಕಳೆದರೂ ನೆಲದೊಳಗೆ ಹೋಗಿಲ್ಲ. ಇದರ ನಡುವೆಯೇ ಕ್ರೀಡಾಳುಗಳು ಮತ್ತು ಸಾರ್ವಜನಿಕರು ಪ್ರತಿ ದಿನ ವಾಕ್ ಮಾಡಬೇಕಾದ ಪರಿಸ್ಥಿತಿ ಇದೆ. ಜತೆಗೆ, ಕಾಮಗಾರಿಗೆ ಹಾಕಿದ್ದ ಜಲ್ಲಿ ಕಲ್ಲು ಸೇರಿದಂತೆ ಇತರೆ ವಸ್ತುಗಳು ಅಲ್ಲಲ್ಲಿ ಬಿದ್ದಿವೆ.ಮಿನಿ ಕಾಡು ಸೃಷ್ಟಿ:ಕಾಮಗಾರಿ ಅರ್ಧಕ್ಕೆ ನಿಂತು ಹೋಗಿರುವುದರಿಂದ ಗಿಡ, ಮರಗಳು ದೊಡ್ಡದಾಗಿ ಬೆಳೆದುಕೊಂಡಿವೆ. ಸ್ಟೇಡಿಯಂನ ಸುತ್ತ ಕುಳಿತುಕೊಂಡು ಆಟ ವೀಕ್ಷಣೆಗೆ ಇದ್ದ ಕಲ್ಲಿನ ಹಾಸುಗಳು ಮರಗಳ ಬೇರುಗಳು ದೊಡ್ಡಾಗಿ ಬೆಳೆದಿರುವುದರಿಂದ ಹಾಳಾಗಿವೆ. ಇಡೀ ಕ್ರೀಡಾಂಗಣದ ತುಂಬ ಮರದ ಎಲೆಗಳ ಕಸ ತುಂಬಿಕೊಂಡಿದೆ. ಜನರು ಓಡಾಡುವುದಕ್ಕೂ ಭಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. --ಬಾಕ್ಸ್--ಸಂಜೆಯಾಗುತ್ತಿದಂತೆ ಕುಡುಕರ ಸಾಮ್ರಾಜ್ಯಕಾಮಗಾರಿ ನಿಂತು ಅವ್ಯವಸ್ತತವಾಗಿರುವ ಜಿಲ್ಲಾ ಶತಮಾನೋತ್ಸವದ ಕ್ರೀಡಾಂಗಣ ಸಂಜೆಯಾಗುತ್ತಿದಂತೆ ಬಾರ್, ರೆಸ್ಟೋರೆಂಟ್ ಆಗಿ ಬದಲಾಗಲಿದೆ. ಅದಕ್ಕೆ ಸಾಕ್ಷಿಯೆಂಬಂತೆ ಕ್ರೀಡಾಂಗಣದ ಒಳಭಾಗದ ಅಲ್ಲಲ್ಲಿ ಬಿಯರ್ ಬಾಟಲ್, ಸಿಗರೇಟ್ ತುಂಡುಗಳು ಕಾಣ ಸಿಗುತ್ತವೆ. ಜತೆಗೆ, ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲ್, ಕವರ್ ಗಳು ಬಿದ್ದಿದ್ದು, ಅವುಗಳನ್ನು ಬೆಂಕಿ ಹಾಕಿ ಸುಟ್ಟು ಹಾಕಿರುವ ಗುರುತುಗಳು ಕಾಣುತ್ತಿವೆ.--ಬಾಕ್ಸ್---ಇದೀಗ ಮತ್ತೆ ಟೆಂಡರ್ ಪ್ರಕ್ರಿಯೆಕೇಂದ್ರ ಸರ್ಕಾರ ನೀಡಿದ ಮೊದಲ ಕಂತಿನ ಅನುದಾನದಲ್ಲಿ ₹50 ಲಕ್ಷ ವೆಚ್ಚವಾಗಿದ್ದು, ಬಾಕಿ ₹3.15 ಕೋಟಿ ಇದೆ. ಅದರೊಂದಿಗೆ ಇದೀಗ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ₹2 ಕೋಟಿ ಹಾಗೂ ಶಾಸಕ ಎಚ್.ಡಿ.ತಮ್ಮಯ್ಯ ₹1 ಕೋಟಿ ಅನುದಾನ ನೀಡಿದ್ದಾರೆ. ಈ ಎಲ್ಲ ಮೊತ್ತ ಒಟ್ಟುಗೂಡಿಸಿ ಕಾಮಗಾರಿ ಮುಂದುವರಿಸಲು ಟೆಂಡರ್ ಆಹ್ವಾನಿಸಲಾಗಿದೆ. ಬಿಡ್ಡಿಂಗ್ ಪರಿಶೀಲನೆ ಮಾಡಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ತ್ವರಿತವಾಗಿ ಕಾಮಗಾರಿ ಆರಂಭಿಸುವುದಾಗಿ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.