ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ಕ್ಷೇತ್ರವನ್ನು ಪ್ರತಿನಿಧಿಸಿದ್ದ ಈ ಹಿಂದಿನ ಸಂಸದರು ಕಾಫಿನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕೊಂಚ ಮಟ್ಟಿಗೆ ಪ್ರಯತ್ನಿಸಿದ್ದಾರಾದರೂ ಜನರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ ಎಂಬ ಆರೋಪವೂ ಇದೆ. ಇದು, ಬಿಜೆಪಿ ಮುಖಂಡರ ಆರೋಪವೂ ಸಹ ಆಗಿದೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ನೋಡುಗರಿಗೆ ಕರಾವಳಿ ಮತ್ತು ಮಲೆನಾಡಿನಂತೆ ಭೌಗೋಳಿಕವಾಗಿ ಕಾಣುತ್ತದೆ. ಇದರ ಜತೆಗೆ ಬಯಲುಸೀಮೆ ಪ್ರದೇಶವನ್ನು ಸಹ ಒಳಗೊಂಡಿದೆ. ಹಾಗಾಗಿ ಕ್ಷೇತ್ರದ ಸಮಸ್ಯೆಗಳು ವಿಭಿನ್ನ.ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಡಿಕೆ, ಕಾಫಿ ಬೆಳೆಯನ್ನು ನಂಬಿಕೊಂಡು ಜನರು ಬದುಕುತ್ತಿದ್ದಾರೆ. ಅಡಿಕೆ ಹಾಗೂ ಕಾಫಿ ಉದ್ಯಮ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಮುಖ್ಯವಾಗಿ ಅಡಿಕೆ ಬೆಳೆಗೆ ಉತ್ತಮ ಬೆಲೆ ಇದ್ದರೂ ಹವಾಮಾನ ವೈಫರೀತ್ಯ, ಹಳದಿ ರೋಗ, ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಗಾರರು ತಮ್ಮ ತೋಟಗಳನ್ನು ಮಾರಾಟ ಮಾಡಿ ನಗರ ಸೇರುವ, ಕೃಷಿಯಿಂದ ವಿಮುಖರಾಗುವಂತಹ ಪರಿಸ್ಥಿತಿಗೆ ತಲುಪಿದ್ದಾರೆ.
ಕಸ್ತೂರಿರಂಗನ್ ವರದಿ ಜಾರಿ ಮಲೆನಾಡಿನ ಜನರ ತಲೆಯ ಮೇಲೆ ತೂಗುಕತ್ತಿಯಂತೆ ಕಾಡುತ್ತಿದ್ದು, ಇದಕ್ಕೆ ಕೇಂದ್ರ ಸರಕಾರದಿಂದ ಶಾಶ್ವತ ಪರಿಹಾರ ಎಂಬುದು ಮರಿಚೀಕೆಯಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಕಾಫಿನಾಡಿನಲ್ಲಿ ಬೃಹತ್ ಹೋರಾಟಗಳೂ ನಡೆದಿದ್ದು, ಕೇಂದ್ರ ಸರಕಾರ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರೊಂದಿಗೆ ಹುಲಿ ಯೋಜನೆ, ಡೀಮ್ಡ್ ಅರಣ್ಯ, ಪರಿಸರ ಸೂಕ್ಷ್ಮ ಪ್ರದೇಶ, 4 (1) ನೋಟಿಫಿಕೇಶನ್, ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದಂತಹ ಅರಣ್ಯ ಯೋಜನೆಗಳು ಮಲೆನಾಡಿನ ಜನರ ನಿದ್ದೆ ಗೆಡಿಸಿದ್ದು, ನೂತನ ಸಂಸದರು ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿ ಹೊರಬೇಕಿದೆ.ಬಯಲುಸೀಮೆ
ಜಿಲ್ಲೆಯಲ್ಲಿ ಉದ್ಯಮ, ಕಾರ್ಖಾನೆಗಳ ಕೊರತೆ ಇದಕ್ಕೆ ಕಾರಣವಾಗಿದ್ದು, ಗಾರ್ಮೇಂಟ್ಸ್‌ನಂತಹ ಬೃಹತ್ ಉದ್ಯಮಗಳ ಸ್ಥಾಪನೆಗೆ ಬಂಡವಾಳ ಹೂಡುವವರನ್ನು ಜಿಲ್ಲೆಯತ್ತ ಆಕರ್ಷಿಸಲು ನೂತನ ಸಂಸದರು ಯೋಜನೆ ರೂಪಿಸಬೇಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ಕ್ಷೇತ್ರ ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದೆ. ಮಿನಿ ವಿಮಾನ ನಿಲ್ದಾಣ, ಸ್ಪೈಸ್ ಪಾರ್ಕ್‌ನಂತಹ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಇವುಗಳ ಜಾರಿಗೆ ನೂತನ ಸಂಸದರು ಅವಿರತ ಶ್ರಮಿಸಬೇಕಿದೆ ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.