ಫಲಾನುಭವಿಗೆ ಯೋಜನೆ ತಲುಪಿಲ್ಲ ಎಂದು ಸಾಬೀತಾದ್ರೆ ರಾಜೀನಾಮೆ ನೀಡುತ್ತೀರಾ?

KannadaprabhaNewsNetwork |  
Published : Feb 02, 2025, 01:00 AM IST
4ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿದರು. | Kannada Prabha

ಸಾರಾಂಶ

ಎಸ್ಇಪಿ ಮತ್ತು ಟಿಎಸ್‌ಪಿ ಯೋಜನೆಯಡಿ ನೀಡಿರುವ ಕೃಷಿ ಯಂತ್ರೋಪಕರಣಗಳು ಫಲಾನುಭವಿಗಳಿಗೆ ತಲುಪಿಲ್ಲ ಎಂದು ಸಾಬೀತು ಮಾಡಿದರೆ ನೀವು ರಾಜೀನಾಮೆ ನೀಡುತ್ತೀರಾ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಸ್ಇಪಿ ಮತ್ತು ಟಿಎಸ್‌ಪಿ ಯೋಜನೆಯಡಿ ನೀಡಿರುವ ಕೃಷಿ ಯಂತ್ರೋಪಕರಣಗಳು ಫಲಾನುಭವಿಗಳಿಗೆ ತಲುಪಿಲ್ಲ ಎಂದು ಸಾಬೀತು ಮಾಡಿದರೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ ರವರನ್ನು ಪ್ರಶ್ನಿಸಿದ ಘಟನೆ ನಡೆಯಿತು.

ಇಲ್ಲಿನ ಜಿಪಂ ನೂತನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯಿಂದ ನೀಡಿರುವ ಎಲ್ಲ ಯಂತ್ರೋಪಕರಣಗಳು ಸರಿ ಇವೆ ಎಂದರೆ ಒಪ್ಪುವುದಿಲ್ಲ. ನಾನು ಗ್ರಾಮೀಣ ಮಟ್ಟದಿಂದಲೇ ಬಂದಿದ್ದು, ನನಗೂ ಎಲ್ಲದರ ಬಗ್ಗೆ ಮಾಹಿತಿ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಇಪಿ ಹಾಗೂ ಟಿಎಸ್‌ಪಿಯಡಿ ಚಾಪ್ ಕಟರ್‌ (ಮೇವು ಕತ್ತರಿಸುವ ಯಂತ್ರ)ನ್ನು ಯಾವ ಆಧಾರದಲ್ಲಿ ನೀಡಿದ್ದೀರಿ? ಎಷ್ಟು ದನಕರುಗಳು ಇರುವವರಿಗೆ ನೀಡಲಾಗಿದೆ ಎಂದು ತಿಳಿಸಿ, ಯಂತ್ರೋಪಕರಣಗಳ ಸದುಪಯೋಗದ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಎಸ್ಇಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ನೀಡುತ್ತಿರುವ ಕೃಷಿ ಸಲಕರಣೆಗಳ ಗುಣಮಟ್ಟ ಸರಿಯಿಲ್ಲ ಎಂದು ರೈತರಿಂದ ಆರೋಪಗಳು ಬರುತ್ತಿವೆ. ಜೊತೆಗೆ ಕೃಷಿ ಇಲಾಖೆಯಿಂದ ನೀಡುವ ತಾಡಪಾಲಗಳು ಹೊರಗೆ ಸಿಗುವ ತಾಡಪಾಲಗಳಿಗಿಂತ ಹೆಚ್ಚಿನ ದರದಲ್ಲಿವೆ ಎಂಬ ಆರೋಪಗಳು ಬರುತ್ತಿದ್ದು ಈ ಬಗ್ಗೆ ಗಮನ ಹರಿಸಿ ಎಂದರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಾವು ಕೆಲವೊಬ್ಬರಿಗೆ ಪತ್ರ ಕೊಟ್ಟಿರುತ್ತೇವೆ. ಅಧಿಕಾರಿಗಳು ಪತ್ರ ಪಡೆದರೂ ಎಲ್ಲವನ್ನು ಸಮನಾಗಿಸಿಕೊಂಡು ನೈಜ ಫಲಾನುಭವಿಗಳಿಗೆ ಯೋಜನೆ ತಲುಪಿಸಿ ಎಂದು ಹೇಳಿದರು.

ವಿಪ ಸದಸ್ಯೆ ಉಮಾಶ್ರೀ ಮಾತನಾಡಿ, ಕೆಳ ಮಟ್ಟದ ಜನಾಂಗದ ಅಭಿವೃದ್ಧಿಗಾಗಿ ಕಾನೂನು ಬಂದಿದ್ದು, ಅದು ಜಾರಿಯಲ್ಲಿದ್ದರೂ ಸರಿಯಾದ ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ ಏಕೆ? ಇದೆ ಮುಂದುವರಿದರೆ ಅಧಿಕಾರಿ ಹಾಗೂ ಫಲಾನುಭವಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅವಕಾಶ ಕಾನೂನಿನಲ್ಲಿದೆ ಎಂದರು.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಯಾವುದೇ ಯೋಜನೆಯಲ್ಲಿ ಫಲಾನುಭವಿಗಳಿಗೆ ಯಂತ್ರೋಪಕರಣಗಳು ತಲುಪುತ್ತಿಲ್ಲ ಎಂದಾದರೆ ಜಿಪಂ ಸಿಇಒ ನೇತೃತ್ವದಲ್ಲಿ ಒಂದು ತಂಡ ರಚಿಸಿ ಅದರ ಮೂಲಕ ಪರಿಶೀಲನೆ ನಡೆಸಬೇಕು. ಆಗ ತಪ್ಪಾಗಿರುವುದು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂದರು.

ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿ, ಮಹಾರಾಷ್ಟ್ರ ಸರಕಾರದಲ್ಲಿ ಮಳೆ ನೀರು ಕೊಯ್ಲು ಬಗ್ಗೆ ವಿನೂತನ ಪ್ರಯೋಗ ಮಾಡಿದ್ದಾರೆ. ನಮ್ಮ ಅಧಿಕಾರಿಗಳು ಅದನ್ನು ವೀಕ್ಷಿಸಿ, ನಮ್ಮ ಬಾದಾಮಿ ತಾಲೂಕಿನಲ್ಲಿ ಅದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಾಗುತ್ತದೆ.

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ತೇರದಾಳ ಶಾಸಕ ಸಿದ್ದು ಸವದಿ, ವಿಪ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ ಸೇರಿದಂತೆ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳಿದ್ದರು.

---

ಬಾಕ್ಸ್... ಕೂಡಲೇ ಹಣ ನೀಡುವ ಕೆಲಸವಾಗಲಿ

ಸರಕಾರದಿಂದ ವಿವಿಧ ಕಾಳುಗಳನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಳು ತಂದ ರೈತರ ಎದುರು ಸಾಣಗಿ ಹಿಡಿಯಲಾಗುತ್ತಿದ್ದು, ರೈತರ ಹೆಸರಿನಲ್ಲಿ ವ್ಯಾಪಾರಸ್ಥರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಜತೆಗೆ ಕಾಳು ಖರೀದಿ ನಂತರ ರೈತರಿಗೆ ನೀಡುವ ಬಿಲ್ ತಿಂಗಳಾದರೂ ನೀಡುತ್ತಿಲ್ಲ. ಕಾಳು ಖರೀದಿಸಿದ ಕೂಡಲೇ ರೈತರಿಗೆ ಹಣ ನೀಡುವ ವ್ಯವಸ್ಥೆ ಮಾಡಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಸೂಚಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ