ತುಕಾರಾಂ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದೊರೆತಿರುವ ಅವಕಾಶ ಬಯಸದೆ ಬಂದ ಭಾಗ್ಯದಂತಿದೆ.
ಸಂಡೂರು: ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಪಟ್ಟಣದ ಹೊರವಲಯದ ಕೃಷ್ಣಾನಗರದಲ್ಲಿನ ಶಾಸಕರ ಕಚೇರಿ ಆವರಣಲ್ಲಿ ಬುಧವಾರ ಬಳ್ಳಾರಿ-ವಿಜಯನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂಡೂರು ಹಾಗೂ ತೋರಣಗಲ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಈ. ತುಕಾರಾಂ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದೊರೆತಿರುವ ಅವಕಾಶ ಬಯಸದೆ ಬಂದ ಭಾಗ್ಯದಂತಿದೆ. ಕ್ಷೇತ್ರದ ಎಲ್ಲ ೮ ತಾಲೂಕುಗಳಲ್ಲಿ ಎಐಸಿಸಿಯಿಂದ ನಡೆದ ಸರ್ವೆಯಲ್ಲಿ ತುಕಾರಾಂ ಹೆಸರೇ ಕೇಳಿ ಬಂದಿದ್ದರಿಂದ, ಪಕ್ಷದ ಹೈಕಮಾಂಡ್ ಅವರನ್ನು ಅವಕಾಶ ಕಲ್ಪಿಸಿದೆ. ಅವರ ಪ್ರಮಾಣಿಕ ಸೇವೆ ಪರಿಗಣಿಸಿ ಅವರನ್ನು ನಾಲ್ಕನೇ ಬಾರಿಗೆ ಸಂಡೂರು ಕ್ಷೇತ್ರದ ಜನತೆ ಗೆಲ್ಲಿಸಿದ್ದೀರಿ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ತುಕಾರಾಂ ಅವರನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ಮನವಿ ಮಾಡಿದರು.ದೇಶದ ಗ್ರಾಮೀಣ ಜನತೆಯು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಜಾರಿಗೆ ತಂದಿದ್ದು, ವಿಧವಾ, ಸಂಧ್ಯಾ ಸುರಕ್ಷ ಮುಂತಾದ ಮಾಸಾಶನಗಳು, ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಮನಮೋಹನ್ ಸಿಂಗ್ ಅವರ ೧೦ ವರ್ಷದ ಆಡಳಿತಾವಧಿಯಲ್ಲಿ ವಾರ್ಷಿಕ ₹೯೦ ಸಾವಿರ ಕೋಟಿ ಸಬ್ಸಿಡಿ ನೀಡಿದ ಪರಿಣಾಮ, ಪೆಟ್ರೋಲ್ ದರ ಲೀಟರ್‌ಗೆ ₹೫೫-೬೦ ಇತ್ತು. ಮನಮೋಹನ್‌ಸಿಂಗ್ ಅವರು ₹೭೩ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದರು. ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನತೆಗೆ, ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದೆ. ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದರು.ಬಿಜೆಪಿ ಬಡವರ ವಿರೋಧಿ ಸರ್ಕಾರವಾಗಿದೆ. ಇದನ್ನು ಕಿತ್ತೊಗೆಯಬೇಕಿದೆ. ವಾರ್ಷಿಕ ೨ ಕೋಟಿ ಉದ್ಯೋಗ ಸೃಷ್ಟಿ ಮುಂತಾದ ಭರವಸೆಗಳ ಕುರಿತು ಬಿಜೆಪಿ ಚಕಾರ ಎತ್ತುತ್ತಿಲ್ಲ. ದೇಶದ ಜಿಡಿಪಿ ಕುಸಿದಿದೆ. ಬಡತನ ಜಾಸ್ತಿಯಾಗಿದೆ ಎಂದರು.ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ್, ಮಾಜಿ ವಿಪ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಪಕ್ಷದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಸಂಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್‌ಕುಮಾರ್, ತೋರಣಗಲ್ಲು ಬ್ಲಾಕ್ ಅಧ್ಯಕ್ಷ ಜಿ. ಏಕಾಂಬ್ರಪ್ಪ, ಶಾಸಕರ ಪುತ್ರಿ ಚೈತನ್ಯಾ, ಮುಖಂಡರಾದ ಟಿ. ಲಕ್ಷ್ಮಣ, ಜನಾರ್ಧನ್, ಗಣೇಶ್, ಕೆ. ಸತ್ಯಪ್ಪ, ರೋಷನ್ ಜಮೀರ್, ರಾಮಾಂಜಿನಿ, ಎನ್.ಎಂ. ವೀರೇಶಯ್ಯ, ಭುವನೇಶ್ ಮೇಟಿ, ರಾಮಾಂಜಿನಿ ಕುಡುತಿನಿ, ಅನಿತಾ ವಸಂತಕುಮಾರ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.