ಕನ್ನಡಪ್ರಭ ವಾರ್ತೆ ಕೆರೂರಪಟ್ಟಣಕ್ಕೆ ಪ್ರೌಢಶಾಲೆ, ಪದವಿ ಕಾಲೇಜು, ಕೆರೂರ ಏತ ನೀರಾವರಿ ಹಾಗೂ ಕೃಷ್ಣಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯಂಥ ಅನೇಕ ಜನಪರ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದು, ಸಿಎಂ ಹಾಗೂ ನನಗೆ ಶಕ್ತಿ ತುಂಬಲು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳಿಸಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.
ಶನಿವಾರ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಮಾತು ಕೊಟ್ಟಂತೆ 5 ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ವರ್ಷಕ್ಕೆ ₹ 1 ಲಕ್ಷ ನೀಡುವುದರ ಜೊತೆಗೆ ಆರೋಗ್ಯ ಭಾಗ್ಯದಡಿ ₹ 25 ಲಕ್ಷವರೆಗೆ ಆಸ್ಪತ್ರೆಯ ಖರ್ಚು ಸೇರಿದಂತೆ ಅನೇಕ ಗ್ಯಾರಂಟಿಗಳನ್ನು ಪಕ್ಷ ನೀಡಿದೆ. ಅವುಗಳ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.ಮೋದಿ ಒಬ್ಬ ಸುಳ್ಳುಗಾರ:
ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುತ್ತೇನೆ. ರೈತರ ಆದಾಯ ದ್ವಿಗುಣಗೊಳಿಸುತ್ತೇನೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ನೀಡಿದ್ದ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದ ಶಾಸಕರು, ಮೋದಿ ಒಬ್ಬ ಸುಳ್ಳುಗಾರನೆಂದು ತಾವೇ ಸಾಬೀತುಪಡಿಸಿದ್ದಾರೆ ಎಂದು ಆರೋಪಿಸಿದರು.ಜಿಪಂ ಮಾಜಿ ಸದಸ್ಯ ಎಂ.ಜಿ.ಕಿತ್ತಲಿ ಮಾತನಾಡಿ, ಸಂಯುಕ್ತಾ ಪಾಟೀಲ ವಕೀಲೆ, ದಿಟ್ಟ ಹೋರಾಟಗಾರ್ತಿ ಸಂಸತ್ತಿಗೆ ಹೋದರೆ ಜಿಲ್ಲೆಗೆ ನ್ಯಾಯ ಒದಗಿಸುತ್ತಾರೆ ಎಂದರು.
ಕೆರೂರಿನ ಶ್ರೀ ಬನಶಂಕರಿ ದೇವಸ್ಥಾನದಿಂದ ಹೊರಟ ರೋಡ್ ಶೋ ರಾಚೋಟೇಶ್ವರ ದೇವಸ್ಥಾನ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪ್ರಮುಖರಾದ ಬಿ.ಬಿ. ಸೂಳಿಕೇರಿ, ವಿಠ್ಠಲಗೌಡ ಗೌಡ್ರ, ಗಿರೀಶ ಅಂಕಲಗಿ, ವಿಕಾಸಕುಮಾರ ದೇಸಾಯಿ, ಪರಸಪ್ಪಜ್ಜ ಚೂರಿ, ಡಾ. ಬಿ.ಕೆ. ಕೊವಳ್ಳಿ, ಉಸ್ಮಾನಸಾಬ ಅತ್ತಾರ, ಯಾಸೀನ್ ಖಾಜಿ, ಮಲ್ಲಣ್ಣ ಹಡಪದ, ರಫೀಕ್ ಫೀರಖಾನ, ಭೀಮಸಿ ಬದಾಮಿ, ಸೈದುಸಾಬ ಚೌಧರಿ, ಮಹಮ್ಮದ ಮುಲ್ಲಾ, ಹಾಸಿಂ ಮುಲ್ಲಾ, ಮಂಜುನಾಥ ತಿಮ್ಮಾಪೂರ, ಕಂಟೇಶ ಕತ್ತಿ, ಅಂದಾನೆಪ್ಪ ಯಂಡಿಗೇರಿ, ಮುನಿಯಪ್ಪ ಚೂರಿ, ಸತೀಶ ಕ್ಷತ್ರಿ, ಉಸ್ಮಾನಸಾಬ ಮುಲ್ಲಾ, ಉಮೇಶ ದಾಸಮನಿ, ಮಹಾಬೂಬಿ ಬೈರಕದಾರ, ದಿನ್ನು ಸುಪದಾರ ಸೇರಿದಂತೆ ಅನೇಕರಿದ್ದರು.