ನೀತಿ, ನಿಯಮ ಇಲ್ಲದೆ ಸಮಾಜ, ನಾಡು ಬೆಳೆಯದು: ರಂಭಾಪುರಿ ಶ್ರೀ

KannadaprabhaNewsNetwork |  
Published : Mar 23, 2026, 02:30 AM IST
ಜನ ಜಾಗೃತಿ ಧರ್ಮ ಸಮಾರಂಭವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ನೀತಿ, ನಿಯಮಗಳಿಲ್ಲದೇ ಸಮಾಜ ನಾಡು ಬೆಳೆಯಲಾರದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟರು.

ಹುಬ್ಬಳ್ಳಿ: ಸೌಕರ್ಯ, ಶಿಸ್ತುಗಳಿದ್ದರಷ್ಟೇ ಸಾಲದು ಸಾಧನೆಗೆ ಸೌಜನ್ಯವಿದ್ದರೇನೆ ಬೆಲೆ. ಸ್ವಾರ್ಥ ರಹಿತ ಬದುಕಿಗೆ ಯಾವಾಗಲೂ ಬಲವಿದೆ. ಶೀಲ ಮತ್ತು ಚಾರಿತ್ರ್ಯಕ್ಕೆ ಬೆಲೆ ಕಟ್ಟಲಾಗದು. ನೀತಿ, ನಿಯಮಗಳಿಲ್ಲದೇ ಸಮಾಜ ನಾಡು ಬೆಳೆಯಲಾರದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟರು.

ನಗರದ ಶ್ರೀ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಜ. ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ 24ನೇ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿವಧರ್ಮದ ತಂಗಾಳಿ ಜೀವನದ ಉನ್ನತಿಗೆ ಸಹಕಾರಿ. ಸಿಹಿ- ಕಹಿಗಳ ಸಂಗಮ ಜೀವನದ ಸಂವರ್ಧನೆಗೆ ಕಾರಣ. ನಿರ್ಭಯದಿಂದ ಬಾಳುವುದೇ ನಿಜವಾದ ಬದುಕು. ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ವೀರಶೈವ ಧರ್ಮದಲ್ಲಿ ಆಧ್ಯಾತ್ಮ ಸಂಪತ್ತು ಬೆಟ್ಟದಷ್ಟಿದೆ. ಅದರ ಅರಿವು ಮತ್ತು ಆಚರಣೆಗೆ ಮನುಷ್ಯ ಬದ್ಧನಾದರೆ ಜೀವನ ಸುಖಮಯವಾಗುತ್ತದೆ. ಜ. ರೇಣುಕಾಚಾರ್ಯರ ಆಧ್ಯಾತ್ಮ ಚಿಂತನೆಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಸಕಲರಿಗೂ ಒಳಿತಾಗಬೇಕೆಂಬುದೇ ಅವರ ಒಲವು ನಿಲುವು. ಧಾರ್ಮಿಕ ಮತ್ತು ಸಾಮಾಜಿಕ ಸತ್‌ಕ್ರಾಂತಿ ಎಲ್ಲ ಕ್ರಾಂತಿಗಳ ಮೂಲ ನೆಲೆ ಸೆಲೆಯಾಗಿದೆ. ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಸತ್ಯ ಶುದ್ಧ ಧರ್ಮಾಚರಣೆಯಿಂದ ಸಂಸ್ಕೃತಿಯ ಸಂವರ್ಧನೆಗೆ ಮಹಿಳೆಯರು ನೀಡಿದ ಕೊಡುಗೆ ಬಹಳಷ್ಟಿದೆ. ಪ್ರತಿ ವರ್ಷ ನಗರದಲ್ಲಿ ಜ. ರೇಣುಕಾಚಾರ್ಯ ಜಯಂತಿ ಹಾಗೂ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಹಳೇ ಹುಬ್ಬಳ್ಳಿ ಪಂಚಗೃಹ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ರೇಣುಕ ಪ್ರಸಾದ್ ಉಪಸ್ಥಿತರಿದ್ದರು. ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡರ ಪಾಲ್ಗೊಂಡಿದ್ದರು. ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಇಂದುಮತಿ ಮಾನ್ವಿ ಸ್ವಾಗತಿಸಿದರು. ಸುಮಂಗಲಾ ಹಿರೇಮಠ ವಿದ್ಯಾ ಹೊರಕೇರಿ ಅವರಿಂದ ವೇದಘೋಷ ಜರುಗಿತು. ಮಹಿಳಾ ಬಳಗದ ಸದಸ್ಯರಿಂದ ಪ್ರಾರ್ಥನಾ ಭಕ್ತಿಗೀತೆ ಜರುಗಿತು. ಮಹಿಳಾ ಮಂಡಳದ ಸದಸ್ಯರು “ವಿಭೂತಿ” ಕಿರು ನಾಟಕ ಪ್ರದರ್ಶಿಸಿದರು. ಪ್ರಭಾವತಿ ಹಿರೇಮಠ ಮತ್ತು ವಾಣಿಶ್ರೀ ಹಿರೇಮಠ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠ: ಚಕ್ರವರ್ತಿ ಸೂಲಿಬೆಲೆ
ಜನರ ಅಹವಾಲು ಆಲಿಸಿದ ಸಚಿವ ವೈದ್ಯ