ಎಚ್ಡಿಡಿ-ಎಚ್ಡಿಕೆ ಹೆಸರಿಲ್ಲದಿದ್ದರೆ ಮಿಸ್ಟರ್ ನಿಖಿಲ್ ಶೂನ್ಯ

KannadaprabhaNewsNetwork |  
Published : May 22, 2026, 01:15 AM IST
21ಕೆಆರ್ ಎಂಎನ್ 3.ಜೆಪಿಜಿಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಮಿಸ್ಟರ್ ನಿಖಿಲ್, ನೀನು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಎನ್ನುವ ಕಾರಣಕ್ಕಷ್ಟೇ ಬೆಲೆ. ಆ ಎರಡೂ ಪದಗಳಿಲ್ಲದಿದ್ದರೆ ನೀನು ರಾಜಕಾರಣದಲ್ಲಿ ಶೂನ್ಯ

ರಾಮನಗರ: ಮಿಸ್ಟರ್ ನಿಖಿಲ್, ನೀನು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಎನ್ನುವ ಕಾರಣಕ್ಕಷ್ಟೇ ಬೆಲೆ. ಆ ಎರಡೂ ಪದಗಳಿಲ್ಲದಿದ್ದರೆ ನೀನು ರಾಜಕಾರಣದಲ್ಲಿ ಶೂನ್ಯ. ನಿಮ್ಮ ತಂದೆ - ತಾತನ ಸರಿಸಮಾನರಾದ ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಮೂರಲ್ಲ ಇನ್ನೂ ನೂರು ಚುನಾವಣೆ ಎದುರಿಸಿದರೂ ಸೋಲುವುದು ಗ್ಯಾರಂಟಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಸ್ಟರ್ ನಿಖಿಲ್ ರಾಜ್ಯದ ಅನುಭವಿ ರಾಜಕಾರಣಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವಷ್ಟು ರಾಜಕೀಯ ಅನುಭವ ಅಥವಾ ವಯಸ್ಸಾಗಲಿ ನಿನಗೆ ಆಗಿಲ್ಲ. ನಿನಗೆ ಮಾತಿನ ಚಪಲ ತೀರಿಸಿಕೊಳ್ಳಬೇಕಾದರೆ ನಿನಗೆ ಸರಿಸಮಾನರಾದ ವ್ಯಕ್ತಿಗಳೊಂದಿಗೆ ಮಾತನಾಡು. ಇದೇ ರೀತಿ ವಯಸ್ಸಿಗೆ ಮೀರಿದ ಮಾತನಾಡಿದರೆ ನೀನು ಎಲ್ಲೇ ಹೋದರು ಘೇರಾವ್ ಹಾಕುವ ಸನ್ನಿವೇಶ ಬರುತ್ತದೆ ಎಂದು ಎಚ್ಚರಿಸಿದರು.

ಏರು ಧ್ವನಿಯಲ್ಲಿ ಮಾತನಾಡಿದರೆ ಜನರು ಚಪ್ಪಾಳೆ ಹೊಡೆಯುತ್ತಾರೆ, ಗೌರವ ಕೊಡುತ್ತಾರೆ ಎಂಬ ಭ್ರಮೆಯಲ್ಲಿದ್ದರೆ ಅದರಿಂದ ಹೊರಗೆ ಬಾ. ನಿಮ್ಮ ತಂದೆಗೆ ಸರಿಸಮಾನರಾದ ಹಾಗೂ ರಾಜಕಾರಣದಲ್ಲಿ ನಿನ್ನ ವಯಸ್ಸಿಗಿಂತ ಹೆಚ್ಚಿನ ಅನುಭವ ಹೊಂದಿ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಡಿ.ಕೆ.ಶಿವಕುಮಾರ್ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.

ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಪಂಚಾಯತ್ ಪರಿಷತ್ ಸದಸ್ಯರಾದ ನಂತರ 1987ರಲ್ಲಿ ಸಾತನೂರು

ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ವಿಧಾನಸೌಧ ಪ್ರವೇಶಿಸಿದರು. ಆದರೆ, 1988ರಲ್ಲಿ ಹುಟ್ಟಿರುವ ನಿನಗೆ 38 ವರ್ಷ ವಯಸ್ಸು ಅಷ್ಟೆ. ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಅನುಭವವೇ 45 ವರ್ಷ. ನಿನ್ನ ವಯಸ್ಸಿಗೆ ಮೀರಿದ ಮಾತುಗಳನ್ನು ಆಡಬೇಡ ಮಿಸ್ಟರ್ ನಿಖಿಲ್ ಎಂದು ಎಚ್ಚರಿಸಿದರು.

ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದಂತೆ ವೀರಾವೇಶದಿಂದ ಡಿ.ಕೆ.ಶಿವಕುಮಾರ್ ಅವರಿಗೆ 2028ರಲ್ಲಿ ಮಾಜಿ ಆಗುತ್ತಾರೆಂದು ಹೇಳಿದ್ದಾನೆ. ಮಿಸ್ಟರ್ ನಿಖಿಲ್ ಬೇರೆಯವರನ್ನು ಮಾಜಿ ಮಾಡುವುದಿರಲಿ, ಮೊದಲು ನೀನು ಹಾಲಿ ಆಗು. ನಿಮ್ಮ ಪಕ್ಷದಲ್ಲಿದ್ದವರು ಅನೇಕರು ಮಾಜಿಗಳಾಗಿ ಹೊರಟು ಹೋಗಿದ್ದಾರೆ. ನೀನು ಮೊದಲು ಹಾಲಿಯಾಗುವ ಬಗ್ಗೆ ಯೋಚನೆ ಮಾಡು ಎಂದು ಟಾಂಗ್ ನೀಡಿದರು.

ಮಂಡ್ಯದ ಸಮಾರಂಭವೊಂದರಲ್ಲಿ ಕುಮಾರಸ್ವಾಮಿಯವರು ನಿಖಿಲ್, ನಿಖಿಲ್ ಎಲ್ಲಿದಿಯಪ್ಪ ಅಂದಾಗ ನೀನು ಟ್ರೋಲ್‌ಗೊಳಗಾಗಿ ಜನರಿಗೆ ಪರಿಚಯವಾದೆ. ನಿಮ್ಮ ತಂದೆ - ತಾತನ ವಯಸ್ಸಿನವರಿಗೆ ಗೌರವ ಕೊಡದೆ ಅಸಂಬದ್ಧ ಮಾತುಗಳನ್ನಾಡಿದರೆ ಚುನಾವಣೆಯಲ್ಲಿ ಜನರು ಒಪ್ಪುವುದಿಲ್ಲ. ಈಗಾಗಲೇ ರಾಮನಗರ, ಮಂಡ್ಯ ಹಾಗೂ ಚನ್ನಪಟ್ಟಣ ಚುನಾವಣೆಗಳಲ್ಲಿ ಜನರು ತಿರಸ್ಕಾರ ಮಾಡಿದ್ದಾರೆ. ತಿದ್ದಿಕೊಂಡು ಮುನ್ನಡೆಯದಿದ್ದರೆ ಮುಂದೆಯೂ ತಿರಸ್ಕಾರಕ್ಕೆ ಒಳಗಾಗುತ್ತೀಯಾ ಎಂದು ಎಚ್ಚರಿಸಿದರು.

ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಹಿರಿಯರ ಬಗ್ಗೆ ಮಾತನಾಡುವಾಗ ಮಿಸ್ಟರ್ ನಿಖಿಲ್ ಎಚ್ಚರಿಕೆ ಇರಲಿ.

ರಾಜಕೀಯದಲ್ಲಿ ತಗ್ಗಿಬಗ್ಗಿ ನಡೆಯಬೇಕು. ನಾಲಿಗೆಗೆ ಗಾಯವಾದರೆ ಔಷಧಿ ಹಚ್ಚಿ ವಾಸಿ ಮಾಡಬಹುದು. ನಾಲಿಗೆಯಿಂದ ಹೊರ ಬಂದ ಘಾಸಿಗೊಳಿಸುವ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ. ಆ ಮಾತುಗಳು ಚುನಾವಣೆಯಲ್ಲಿ ಉತ್ತರ ನೀಡುತ್ತವೆ ಎಂದು ಹೇಳಿದರು.

ನಿಮ್ಮ ತಂದೆ - ತಾತಾನವರು ದಾನ ಧರ್ಮ ಮಾಡಿದ್ದಾರೆ. ನೀನು ಎಲ್ಲಿ ಯಾವಾಗ ದಾನ ಧರ್ಮ ಮಾಡಿದ್ದಿಯಾ ಹೇಳು. ನಮ್ಮ ತಾಯಿ ಹೆಸರಿನಲ್ಲಿ ಜಮೀನಿದ್ದರೆ ಆ ಜಮೀನನ್ನು ಬಡಜನರಿಗೆ ಹಂಚುತ್ತೇನೆ ಎಂದು ಸವಾಲು ಹಾಕಿದ್ದೆ. ಆ ದಾಖಲೆಗಳನ್ನು ಬಿಡುಗಡೆ ಮಾಡಿದೆ, ಇಲ್ಲಿವರೆಗೆ ಏಕೆ ಉತ್ತರ ಕೊಡಲಿಲ್ಲ ಎಂದು ನಿಖಿಲ್ ಅವರನ್ನು ಗಾಣಕಲ್ ನಟರಾಜ್ ಪ್ರಶ್ನಿಸಿದರು.

ದಾಖಲೆ ಬಿಡುಗಡೆ ಮಾಡಲಿ:

ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಒಂದು ಗುಂಟೆ ಸರ್ಕಾರಿ ಭೂಮಿಯನ್ನು ಡಿ.ಕೆ.ಶಿವಕುಮಾರ್ ಅವರಾಗಲಿ, ಅವರ ಸಂಬಂಧಿಕರಾಗಲಿ ಅಥವಾ ಅಧಿಕಾರಿಗಳಾಗಲಿ ಹೆಸರಿಗೆ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಸಿ.ಎಂ.ಲಿಂಗಪ್ಪನವರು ಶಾಸಕರಾಗಿದ್ದಾಗ 9 ಕಂದಾಯ ಗ್ರಾಮಗಳಲ್ಲಿನ 31 ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಬರುವ ಅಂದಾಜು 1300 ಎಕರೆ ಭೂಮಿಯನ್ನು 732 ಜನರಿಗೆ ಮಂಜೂರಾತಿ ಮಾಡಿದ್ದಾರೆ. ಆ ದಾಖಲೆಗಳನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡುತ್ತಾರೆ. 2150 ಎಕರೆ ಗೋಮಾಳ ಜಮೀನನ್ನು 1300 ಎಕರೆ ಮಂಜೂರಾತಿ ಮಾಡಿದ ಮೇಲೆ ಪೋಡಿ ದುರಸ್ತಿ ಆಗಿರಲಿಲ್ಲ. ಪ್ರಾದಿಕಾರ ಬೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ದುರಸ್ಥಿ ಮಾಡಿ ಪೋಡಿ ಮಾಡುವ ಕೆಲಸ ಮಾಡಿತು. ಇನ್ನು 70 ರಿಂದ 80 ರೈತರಿಗೆ 180 ಎಕರೆ ಪಹಣಿ ನೀಡಬೇಕಿದೆ. ಆ ಸರ್ಕಾರಿ ಜಮೀನು ರೈತರ ಹೆಸರಿನಲ್ಲಿ ಪೋಡಿಯಾಗಿ ದುರಸ್ತಿಯಾಗಿದೆ ಎಂದು ತಿಳಿಸಿದರು.

ಬಾಕ್ಸ್‌

ಅಶೋಕ್ ಪಾಲುದಾರರು:

ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿನ ವಿರೋಧಪಕ್ಷದ ನಾಯಕ ಆರ್.ಅಶೋಕ್ ಸಚಿವರಾಗಿದ್ದರು. ಈ ಅವಧಿಯಲ್ಲಿಯೂ ಬಿಡದಿ ಟೌನ್ ಶಿಪ್ ಯೋಜನೆ ಅನುಷ್ಠಾನಗೊಳಿಸುವ ಪ್ರಕ್ರಿಯೆಗಳು ನಡೆದಿವೆ. ಆ ಸಭೆಗಳಲ್ಲಿ ಅಶೋಕ್ ಪಾಲ್ಗೊಂಡಿದ್ದರು ಎಂದು ದಾಖಲೆ ಬಿಡುಗಡೆ ಮಾಡಿದರು. ಆಗೆಲ್ಲ ಯೋಜನೆ ವಿರೋಧ ಮಾಡಲಿಲ್ಲ. ಇತ್ತೀಚೆಗೆ ಅಧಿವೇಶನದಲ್ಲಿ ಯೋಜನೆ ಪರವಾಗಿ ಮಾತನಾಡಿರುವ ಅಶೋಕ್ ಈಗ ದ್ವಂದ್ವ ನಿಲುವು ತಾಳಿದ್ದಾರೆ. ಈ ಯೋಜನೆಯಲ್ಲಿ ಅಶೋಕ್ ಅವರು ಪಾಲುದಾರರು ಎಂದು ಗಾಣಕಲ್ ನಟರಾಜ್ ತಿರುಗೇಟು ನೀಡಿದರು.

ಕೋಟ್ ..............

2006-07-2026-27ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಬಿಡದಿ ಟೌನ್‌ಶಿಪ್ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿವೆ. 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೇ 5 ಸಮಗ್ರ ಉಪನಗರಗಳ ಅನುಷ್ಠಾನಕ್ಕೆ ತೀರ್ಮಾನ ಮಾಡಿದರು. ಆನಂತರ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸದಾನಂದಗೌಡರು ಯೋಜನೆಗೆ ವೇಗ ನೀಡಿದರು. ಇದೀಗ ಸಿದ್ದರಾಮಯ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರಿಗೆ ಉತ್ತಮ ಬೆಲೆ ಕೊಡಿಸಿದ್ದಾರೆ. ಇದು‌ ಶಿವಕುಮಾರ್ ಅವರು ರೈತರ ಮೇಲೆ ಇಟ್ಟಿರುವ ಬದ್ದತೆಯಾಗಿದೆ.

- ಗಾಣಕಲ್ ನಟರಾಜು, ಅಧ್ಯಕ್ಷರು, ಜಿಬಿಡಿಎ

21ಕೆಆರ್ ಎಂಎನ್ 3.ಜೆಪಿಜಿ

ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರಸಭೆ ಅಧ್ಯಕ್ಷರಾಗಿ ಭವ್ಯಾ ಮಂಜುನಾಥ್ ಅವಿರೋಧ ಆಯ್ಕೆ
ಬಿಜೆಪಿ-ಕಾಂಗ್ರೆಸ್‌ ಹೈಡ್ರಾಮ: ಕೈ ಕೈ ಮಿಲಾಯಿಸಿದ ಕಾರ್ಯಕರ್ತರು