ಚಿಕ್ಕಮಗಳೂರುನಗರಸಭೆಯ ಕೊನೆ 9 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಭವ್ಯಾ ಮಂಜುನಾಥ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರ ಸಲ್ಲಿಸಿದ್ದು ಕೇವಲ ಒಬ್ಬರೆ । ಅವಿರೋಧ ಆಯ್ಕೆ ಘೋಷಿಸಿದ ಉಪವಿಭಾಗಾಧಿಕಾರಿ ನಟೇಶ್

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರಸಭೆಯ ಕೊನೆ 9 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಭವ್ಯಾ ಮಂಜುನಾಥ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜೆಡಿಎಸ್‌ನ ನಿಕಟಪೂರ್ವ ಅಧ್ಯಕ್ಷೆ ಶೀಲಾ ದಿನೇಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಿಗಧಿಯಾಗಿದ್ದ ಚುನಾವಣೆಯಲ್ಲಿ ಭವ್ಯಾ ಮಂಜುನಾಥ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ನಟೇಶ್ ಅವರು ಅವಿರೋಧ ಆಯ್ಕೆ ಘೋಷಿಸಿದರು.

ನಗರಸಭೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಬಂದಿದ್ದರಿಂದ ಮೂವರು ಸದಸ್ಯೆಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಮೊದಲ ಹತ್ತು ತಿಂಗಳ ಅವಧಿಗೆ ಬಿಜೆಪಿಯ ಸುಜಾತ ಶಿವಕುಮಾರ್, ಬಳಿಕ ಜೆಡಿಎಸ್‌ನ ಶೀಲಾ ದಿನೇಶ್ ಹಾಗೂ ಕೊನೆ 9 ತಿಂಗಳಿಗೆ ಇದೀಗ ಭವ್ಯಾ ಮಂಜುನಾಥ್ ಆಯ್ಕೆಯಾಗಿದ್ದಾರೆ.

ನಗರದ 32 ನೇ ವಾರ್ಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಭವ್ಯಾ ಮಂಜುನಾಥ್ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ನಾಯಕರು ಭವ್ಯಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನಿಸಿ ಅದರಂತೆ ಅವರನ್ನೇ ಅಧ್ಯಕ್ಷರನ್ನಾಗಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ನಗರಮಂಡಲ ಅಧ್ಯಕ್ಷ ಕೆ.ಎಸ್.ಪುಷ್ವರಾಜ್, ಮುಖಂಡ ಕೋಟೆ ರಂಗನಾಥ್, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಸದಸ್ಯರಾದ ರೂಪಕುಮಾರ್, ಕವಿತಾ ಶೇಖರ್, ಸುಜಾತ ಶಿವಕುಮಾರ್, ಶೀಲಾ ದಿನೇಶ್, ಮಧುಕುಮಾರ್ ರಾಜ್ ಅರಸ್, ಎ.ಸಿ. ಕುಮಾರ್, ಗೋಪಿ, ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತ ಬಿ.ಸಿ.ಬಸವರಾಜ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

-- ಬಾಕ್ಸ್......

ಸರ್ವಾನುಮತದ ಆಯ್ಕೆ: ಅಭಿನಂದನೆ

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಲವು ಸದಸ್ಯರು ಆಕಾಂಕ್ಷಿಗಳಿದ್ದರು. ಆದರೆ ಭವ್ಯಾ ಮಂಜುನಾಥ್ ಹೆಸರು ಪ್ರಸ್ತಾಪವಾದಾಗ ಎಲ್ಲರೂ ಸರ್ವಾನುಮತದಿಂದ ಸಹಕರಿಸಿ ಅವಿರೋಧ ಆಯ್ಕೆಗೆ ಕಾರಣಕರ್ತರಾಗಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಿಕ್ಕಿರುವ ಅವಧಿಯಲ್ಲಿ ನೂತನ ಅಧ್ಯಕ್ಷರು ಜನಪರ ಕಾರ್ಯಕ್ಕೆ ಒತ್ತು ಕೊಡಬೇಕು. ಕಸ ನಿರ್ವಹಣೆ, ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ಸರಬ ರಾಜಿನಲ್ಲಿ ವ್ಯತ್ಯಾಸವಾಗದಂತೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪ, ಒಳ ಚರಂಡಿ ವ್ಯವಸ್ಥೆ, ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಗಂಭೀರ ಚಿಂತನೆ ಮಾಡಿದಾಗ ಮಾತ್ರ ಜನಸ್ನೇಹಿ ಆಡಳಿತ ಕೊಡಲು ಸಾಧ್ಯ. ಇದನ್ನು ಒಂದು ಸವಾಲಾಗಿ ಸ್ವೀಕರಿಸಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಉತ್ತಮ ಕೆಲಸ ಮಾಡಬೇಕು. ಈಗ ಹಾರ ಹಾಕಿ ಶುಭಾಷಯ ಕೋರಿದಂತೆ ಅವಧಿ ಮುಗಿದ ಬಳಿಕ ಮೆಚ್ಚುಗೆ ವ್ಯಕ್ತಪಡಿಸುವ ರೀತಿ ಆಡಳಿತದಲ್ಲಿ ಹೆಜ್ಜೆ ಗುರುತು ಮೂಡಿಸುವಂತೆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.-- ಬಾಕ್ಸ್.......

ಹಣದಿಂದ ಅಧಿಕಾರ ಸಿಗುವುದಿಲ್ಲ

ಹಣದಿಂದಲೇ ಅಧ್ಯಕ್ಷರಾಗುತ್ತಾರೆ ಎಂಬ ಆರೋಪ ಇಂದು ದೂರಾಗಿದೆ. ಭವ್ಯಾ ಮಂಜುನಾಥ್ ನಗರಸಭೆ ಅಧ್ಯಕ್ಷರಾಗುವ ಮೂಲಕ ಹಣದಿಂದಲೇ ಎಲ್ಲವೂ ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿಯಲ್ಲಿ 25 ವರ್ಷಗಳಿಂದ ಸಲ್ಲಿಸಿದ ಸೇವೆಗೆ ಇದೀಗ ಭವ್ಯಾ ಅವರಿಗೆ ಸೂಕ್ತ ಗೌರವ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದರು.

ನಗರಸಭೆ ಅಧಿಕಾರವನ್ನು ಬಿಜೆಪಿ ಹಿಡಿದು ಅಭಿವೃದ್ಧಿ ಸಾಧಿಸಿದೆ. ಈ ನಿಟ್ಟಿನಲ್ಲಿ ಭವ್ಯ ಮಂಜುನಾಥ್ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ನೂತನ ಅಧ್ಯಕ್ಷರು ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು ಎಂದು ಶುಭಕೋರಿದರು.-- ಬಾಕ್ಸ್.....

ಪಕ್ಷಕ್ಕೆ ಹೆಸರು ಬರುವ ರೀತಿ ಕಾರ್ಯನಿರ್ವಹಿಸುತ್ತೇನೆ

ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಉತ್ತಮ ಸ್ಥಾನ ನೀಡಲಾಗುತ್ತದೆ. ನನ್ನ ಅಧಿಕಾರ ಅವಧಿಯಲ್ಲಿ ಜನಸಾಮಾನ್ಯರ ಕೆಲಸ ಮಾಡಿ ಪಕ್ಷಕ್ಕೆ ಹೆಸರು ತಂದುಕೊಡುತ್ತೇನೆ. ನಮ್ಮ ಮನೆಯವರು ಪೇಂಟಿಂಗ್ ಕಂಟ್ರ್ಯಾಕ್ಟರ್‌ ಆಗಿದ್ದು, ಪಕ್ಷದಲ್ಲಿ 25 ವರ್ಷಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ್ದಾರೆ ಎಂದು ನೂತನ ಅಧ್ಯಕ್ಷೆ ಭವ್ಯಾ ಮಂಜುನಾಥ್ ತಿಳಿಸಿದರು.

ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ನಗರಸಭೆ ಸದಸ್ಯರು ಒಗ್ಗಟ್ಟಿನಿಂದ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ತಮ್ಮ ಅಧಿಕಾರಾವಧಿಯಲ್ಲಿ ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರು, ಒಳ ಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ ಎಂದರು.

ಫೊಟೋ:

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಭವ್ಯಾ ಮಂಜುನಾಥ್ ಅವರನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಎಂಎಲ್‌ಸಿಗಳಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಎಂ.ಆರ್.ದೇವರಾಜ ಶೆಟ್ಟಿ, ಕೆ.ಎಸ್.ಪುಷ್ಪರಾಜ್, ವರಸಿದ್ಧಿ ವೇಣುಗೋಪಾಲ್, ಮಧುಕುಮಾರ್ ರಾಜ್ ಅರಸ್ ಮತ್ತಿತರರು ಅಭಿನಂದಿಸಿದರು.