ಹುಬ್ಬಳ್ಳಿ:
ಪೊಲೀಸರು ಮಹಿಳೆಯ ವಿವಸ್ತ್ರಗೊಳಿಸಿ ಬಂಧಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗ ನಡೆಯಿತು.
ಮೇಯರ್-ಉಪಮೇಯರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ನಂತರ ಬಿಡುಗಡೆ ಮಾಡಿದರು. ಪ್ರತಿಭಟನೆ ವೇಳೆ ತೀವ್ರ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯುವ ಮೂಲಕ ಠಾಣೆಯ ಎದುರಿಗೆ ದೊಡ್ಡ ಹೈಡ್ರಾಮಾ ನಡೆಯಿತು.ಅಲ್ಲದ ರಾಜ್ಯಮಟ್ಟದಲ್ಲೂ ಈ ಪ್ರಕರಣ ಧ್ವನಿಸಿದ್ದು, ಭಾರೀ ಆರೋಪ- ಪ್ರತ್ಯಾರೋಪ ಕೇಳಿ ಬರುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿಯಲ್ಲಿ "ಪೊಲೀಸರು ವಿವಸ್ತ್ರಗೊಳಿಸಿಲ್ಲ, ಮಹಿಳೆಯೇ ಬಂಧನದ ವೇಳೆ ತಾನೇ ವಸ್ತ್ರ ಕಳಚಿ, ಪೊಲೀಸರನ್ನು ಕಚ್ಚಿದ್ದಾಳೆ " ಎನ್ನುವ ಸ್ಪಷ್ಟಣೆಯನ್ನೂ ನೀಡಿದ್ದಾರೆ. ಆದಾಗ್ಯೂ ಬಿಜೆಪಿ ಈ ಘಟನೆ ಖಂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
ಏನಿದು ಘಟನೆ?ನಾಲ್ಕು ದಿನಗಳ ಹಿಂದೆ ಇಲ್ಲಿನ ಚಾಲುಕ್ಯ ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ವ ಪ್ರತಿ ಕುಟುಂಬಗಳ ಸದಸ್ಯರ ಸಮೀಕ್ಷೆ (ಎಸ್‌ಐಆರ್) ನಡೆಸುತ್ತಿದ್ದು ಬಿಎಲ್‌ಒ ನಂದಿನಿ ಅವರೊಂದಿಗೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಎಂಬುವರು ಇದ್ದು, ಮಾಹಿತಿ ನೀಡಿದ್ದಾರೆ. ಇದಕ್ಕೆ ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಹಾಗೂ ಇತರರು ಆಕ್ಷೇಪಿಸಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಬಳಿಕ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿ ದೂರು ನೀಡಲಾಗಿದೆ.
ಆದರೆ, ಸುಜಾತಾ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿ 3 ದಿನದ ಹಿಂದೆಯೇ ಸುಜಾತಾ ಅವರನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಅವರ ಮೈಮೇಲಿನ ವಸ್ತ್ರ ಅಸ್ತವ್ಯಸ್ತ ಆಗಿರುವ ವಿಡಿಯೋ ವೈರಲ್ ಆಗಿದೆ.ಈ ವಿಡಿಯೋ ಮುಂದಿಟ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಪೊಲೀಸರು ವಿವಸ್ತ್ರಗೊಳಿಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿದೆ. ಆದರೆ, ಪೊಲೀಸ್ ಕಮೀಶ್ನರ್ ಕೆ.ಶಿವಕುಮಾರ್ ಅವರು "ಬಂಧನದ ವೇಳೆ ಮಹಿಳೆಯೇ ತಮ್ಮ ಬಟ್ಟೆಯನ್ನು ತಾವೇ ಬಿಚ್ಚಿಕೊಂಡು, ಬಂಧನಕ್ಕೆ ಪ್ರತಿರೋಧ ಒಡ್ಡಿದರು. ಆಗ ನಮ್ಮ ಪೊಲೀಸರೇ ಬಿಚ್ಚಿದ ಬಟ್ಟೆಯನ್ನು ಆ ಮಹಿಳೆಗೆ ತೊಡಿಸಿ ಕರೆದೊಯ್ದಿದ್ದಾರೆ. ಪೊಲೀಸರಿಂದ ಯಾವುದೇ ಅಚಾತುರ್ಯ ನಡೆದಿಲ್ಲ " ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ, ಬ್ಯಾರಿಕ್ಕೇಡ್ ಅಳವಡಿಕೆ:ಬಿಜೆಪಿ ಕಾರ್ಯಕರ್ತರು ಬುಧವಾರ ಮಧ್ಯಾಹ್ನ ಕೇಶ್ವಾಪುರ ಠಾಣೆ ಎದುರು ಜಮೆಯಾಗಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಡ್ಡಲಾಗಿ ಬ್ಯಾರಿಕ್ಕೇಡ್ ಅಳವಡಿಸಿ ಠಾಣೆಗೆ ಮುತ್ತಿಗೆ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಡಿಸಿಪಿ ಮಹಾನಿಂಗ ನಂದಗಾವಿ ಮನವೊಲಿಸಲು ಸಾಕಷ್ಟು ಯತ್ನಿಸಿದರೂ ವಿಫಲವಾಯಿತು.
ಈ ನಡುವೆ ತಮ್ಮನ್ನಷ್ಟೇ ಠಾಣೆಯೊಳಗೆ ಬಿಟ್ಟ ಮೇಯರ್ ಜ್ಯೋತಿ ಪಾಟೀಲ ಮತ್ತು ಉಪಮೇಯರ್ ಸಂತೋಷ ಚವ್ಹಾಣ್ ಠಾಣೆಯ ಮೆಟ್ಟಿಲು ಮೇಲೆ ಧರಣಿ ನಡೆಸಿದರು. ಇನ್ನೊಂದೆಡೆ ಠಾಣೆಯ ಹೊರಗೆ ಬಿಜೆಪಿ ಕಾರ್ಯಕರ್ತರು ಧರಣಿ ಮುಂದುವರಿಸಿದ್ದರು. ಬಳಿಕ ಕೆಲ ಮುಖಂಡರನ್ನು ಕರೆದು ಮಾತುಕತೆ ಮೂಲಕ ಬಗೆಹರಿಸಲು ಕಮಿಷನರ್ ಯತ್ನಿಸಿದರೂ ಸಂಧಾನ ವಿಫಲವಾಯಿತು.ಮಹಿಳೆ ಅವಮಾನಿಸಿದ ಠಾಣಾಧಿಕಾರಿ ಕೆ.ಎಸ್. ಹಟ್ಟಿ ಹಾಗೂ ಭಾಗಿಯಾಗಿರುವ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಸುವರ್ಣ ಕಲ್ಲಕುಂಟ್ಲಾ ಅವರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದು, ಠಾಣೆ ಹೊರಗೆ ಭಜನೆ ಮೂಲಕ ಧರಣಿ ಮುಂದುವರಿಸಿದರು. ಸಂಜೆ ಇವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಈ ನಡುವೆ ಸುಜಾತಾ ಅವರ ತಾಯಿ ಕಮಲಮ್ಮ ಠಾಣೆಗೆ ಬಂದು ಸುವರ್ಣ ಕಲ್ಲಕುಂಟ್ಲಾ, ಪೊಲೀಸರ ವಿರುದ್ಧ ದೂರು ನೀಡಿದರು. ಪೊಲೀಸ್ ಕಮಿಷನರ್ ಶಶಿಕುಮಾರ ಆಗ ಡಿಸಿಪಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಠಾಣೆಗೆ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಸೇರಿದಂತೆ ಹಲವರಿದ್ದರು.