ಬಳ್ಳಾರಿ: ನಗರದ ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ.
ನಗರದ ವೈದ್ಯಕೀಯ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೃತ ಬಸವನಗೌಡ ಪಾಟೀಲ್ (26) ಎಂಬಾತ ಕಳೆದ ಹಲವು ತಿಂಗಳುಗಳಿಂದ ಶ್ವೇತಾ ಎಂಬ ಮಹಿಳೆಗೆ ಮೊಬೈಲ್ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ. ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಕಾಮತೃಷೆಗೆ ಒತ್ತಾಯಿಸುತ್ತಿದ್ದ. ಈ ಕಿರುಕುಳದಿಂದ ಬೇಸತ್ತ ಮಹಿಳೆ ಯುವಕನ ವರ್ತನೆಯ ವಿಷಯವನ್ನು ಪತಿಗೆ ತಿಳಿಸಿದ್ದಳು. ಬಸವನಗೌಡನ ವಿಕೃತಿಗೆ ಕೊನೆ ಹಾಡಲು ಸಂಚು ರೂಪಿಸಲಾಗಿತ್ತು. ಜೂ. 7ರಂದು ರಾತ್ರಿ ಬಸವನಗೌಡನನ್ನು ಮಹಿಳೆಯೇ ಮೋಕಾ ಬಳಿ ಕರೆಸಿಕೊಂಡಿದ್ದಳು. ಸಂಚಿನಂತೆ ಅದಾಗಲೇ ಕಾದು ಕುಳಿತಿದ್ದ ಮಹಿಳೆಯ ಪತಿ ದೊಡ್ಡ ಬಸವನಗೌಡ ಮತ್ತು ಸಹೋದರ ವಿಜಯ್ ಸೇರಿ ಕುತ್ತಿಗೆಗೆ ಹಗ್ಗ ಬಿಗಿದು ಕೊಂದಿದ್ದರು. ಬಳಿಕ ಶವವನ್ನು ಸುಮಾರು 10 ಕಿ.ಮೀ. ದೂರ ಒಯ್ದು ಬೆಂಕಿಹಚ್ಚಿ ಸುಟ್ಟಿದ್ದರು. ಮರುದಿನ ಬೆಳಗ್ಗೆ ಯುವಕನ ಮೃತದೇಹವು ಶಿವಪುರ ಮತ್ತು ತಂಬ್ರಹಳ್ಳಿ ಎಲ್‌ಎಲ್‌ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನ ಮಾವ ಹಂಪನಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವಕನ ಕೊಲೆ ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ನಡೆದಿರಬಹುದು ಎಂದೇ ತಿಳಿಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಮೃತನ ಮೊಬೈಲ್ ಕರೆ ವಿವರಗಳು, ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಸಂಪರ್ಕಗಳ ಪರಿಶೀಲನೆ ವೇಳೆ ಮಹತ್ವದ ಸುಳಿವುಗಳು ಲಭಿಸಿದವು. ವಿಶೇಷವಾಗಿ ಮೃತನ ವಾಟ್ಸ್‌ಆ್ಯಪ್ ಸಂದೇಶಗಳ ಪರಿಶೀಲನೆಯಿಂದ ಮಹಿಳೆಯೊಂದಿಗೆ ಇದ್ದ ಸಂಪರ್ಕದ ಮಾಹಿತಿ ಹೊರಬಂದಿತು. ಇದೇ ತನಿಖೆಗೆ ಪ್ರಮುಖ ತಿರುವು ನೀಡಿದೆ.ಮೃತ ಬಸವನಗೌಡ ಪಾಟೀಲ್ ನಿರಂತರವಾಗಿ ಸಂದೇಶ ಕಳುಹಿಸುತ್ತಿರುವ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟಾಗ ಶ್ವೇತಾ ಎಂಬುವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಕೃತ್ಯ ಎಸಗಿದ ಶ್ವೇತಾ ಅವರ ಪತಿ ದೊಡ್ಡಬಸವನಗೌಡ ಹಾಗೂ ಸೋದರ ವಿಜಯ್ ಅವರ ಮೊಬೈಲ್ ಕೃತ್ಯ ನಡೆದ ಸ್ಥಳದಲ್ಲಿ ಸಕ್ರಿಯವಾಗಿದ್ದವು ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಯಿತು. ಬಳಿಕ ವಿಚಾರಣೆ ನಡೆಸಿದಾಗ ಯುವಕನನ್ನು ಹತ್ಯೆಗೈಯಲು ಶ್ವೇತಾ ಅವರ ಕುಟುಂಬ ಸದಸ್ಯರೊಂದಿಗೆ ಸೇರಿ ಸಂಚು ರೂಪಿಸಿ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.