ಕನ್ನಡಪ್ರಭ ವಾರ್ತೆ ಬೆಳಗಾವಿ
ಶಿಂಧೋಳಿ ಗ್ರಾಮದ ಭಾರತಿ ಪೂಜಾರಿ ( 48) ಮೃತಪಟ್ಟ ಮಹಿಳೆ. ಶಿಂಧೋಳಿ ಗ್ರಾಮದ ಮಸಣವ್ವ ದೇವಸ್ಥಾನಕ್ಕೆ ಕಳ್ಳರು ಕಳ್ಳತನಕ್ಕೆ ಬಂದಿದ್ದರು. ಈ ವೇಳೆ ತನ್ನ ಮನೆಯ ದನಕರುಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಬಂದಿದ್ದ ಈ ಮಹಿಳೆ ಕಳ್ಳರನ್ನು ನೋಡಿದ್ದಾಳೆ. ಆಗ ದುಷ್ಕರ್ಮಿಗಳು ನಮ್ಮ ಕೃತ್ಯಬಯಲಾಗುತ್ತದೆ ಎಂದು ಮಹಿಳೆಯನ್ನು ಹೊತ್ತೊಯ್ದು ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳ್ಳರು ದೇವಸ್ಥಾನದಲ್ಲಿನ ಬೆಳ್ಳಿಯ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆಯಿಂದ ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಭಾರತಿ ಅವರನ್ನು ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಸಿಗದ್ದರಿಂದ ಆತಂಕಗೊಂಡ ಅವರಿಗೆ ಬಾವಿ ಬಳಿ ಭಾರತಿ ಚಪ್ಪಲಿ ಕಂಡಿವೆ ಎಂದು ಹೇಳಲಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ತಪಾಸಣೆ ಮಾಡಿದಾಗ ಬಾವಿಯಲ್ಲಿ ಭಾರತಿ ಅವರ ಶವ ಪತ್ತೆಯಾಗಿದೆ. ಮಸಣವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದಕ್ಕೂ ಮತ್ತು ಬಾವಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವುದಕ್ಕೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.