ಹುಬ್ಬಳ್ಳಿ: ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗಿಂತ ಹೆಚ್ಚು ಮಹಿಳೆಯರೇ ಸಾಧನೆ ಮಾಡುತ್ತಿದ್ದು, ಬಾಹ್ಯಾಕಾಶದಲ್ಲಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮಾಡಿದ ಸಾಧನೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಆಧುನಿಕತೆ ಹಾಗೂ ಎಐ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗುತ್ತಿವೆ. ಆದರೆ, ಮೊದಲಿನಿಂದಲೂ ಮಹಿಳೆಯರನ್ನು ಕಾಡುತ್ತಿರುವ ತಾತ್ಸಾರ ಭಾವನೆ ಹಾಗೂ ಪುರುಷ ಪ್ರಧಾನ ಧೋರಣೆ ಇಂದಿಗೂ ಮಾತ್ರ ಕಡಿಮೆಯಾಗದಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದರು.
ಮಹಿಳೆಯರು ಎಷ್ಟೇ ಸಾಧನೆಯ ಶಿಖರವೇರುತ್ತಿದ್ದರೂ ಅವರನ್ನು ಸಮಾಜವು ನಿರ್ಲಕ್ಷ್ಯ ಮಾಡುತ್ತಿದೆ. ಹೆಣ್ಣಿಗಿಂತ ಗಂಡು ಮಗು ಶ್ರೇಷ್ಠ ಎಂಬ ಮನೋಭಾವನೆ ಇಂದಿಗೂ ಮುಂದುವರೆಯುತ್ತಿರುವುದು ದುರದೃಷ್ಟಕರ ಸಂಗತಿ. ಪಾಲಕರು ಹೆಣ್ಣು ಗಂಡು ಎಂದು ತಾತ್ಸಾರ ಮಾಡದೇ, ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಅವಳು ಮತ್ತಷ್ಟು ಮಹಾನ್ ಸಾಧನೆ ಮಾಡುತ್ತಾಳೆ ಎಂದರು.ಕೆಸಿಸಿಐ ಸಂಸ್ಥೆಯಲ್ಲಿ 3500 ಸದಸ್ಯರ ಪೈಕಿ 500ಕ್ಕೂ ಹೆಚ್ಚು ಮಹಿಳೆಯರು ಇರುವುದು ಹೆಮ್ಮೆಯ ಸಂಗತಿ. ಪುರುಷರಿಗಿಂತ ಅದ್ಭುತ ಶಕ್ತಿ ಸಾಮರ್ಥ್ಯ ಭಗವಂತ ಮಹಿಳೆಯರಿಗೆ ನೀಡಿದ್ದಾನೆ. ಅದನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ತಾವು ಬದುಕಿನಲ್ಲಿ ಎದುರಿಸಿದ ಸವಾಲು ಹಾಗೂ ಕಷ್ಟದ ದಿನಗಳನ್ನು, ತದ ನಂತರ ಫ್ಯಾಷನ್, ಸಿನಿಮಾರಂಗ ಮತ್ತು ಆ್ಯಂಕರಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಎಳೆಎಳೆಯಾಗಿ ವಿವರಿಸಿದರು. ನಂತರ ನಡೆದ ಸಂವಾದದಲ್ಲಿ ಕೇಳುಗರ ಪ್ರಶ್ನೆಗೆ ನಟಿ ಸಿಮ್ರಾನ್ ಅಹುಜಾ ಉತ್ತರಿಸಿದರು.
ಮಹಿಳಾ ಸಾಧಕರಿಗೆ ಸನ್ಮಾನ:ಸಮಾರಂಭದಲ್ಲಿ ಬಸವಾದಿ ಶರಣರ ವಚನ ವ್ಯಾಖ್ಯಾನ ಒಳಗೊಂಡ ಅನೇಕ ಸಂಕಲನಗಳನ್ನು ಪ್ರಕಟಿಸಿದ ಶರಣೆ ಗಿರಿಜಕ್ಕ ಧರ್ಮರಡ್ಡಿ, ಮಹಿಳಾ ಉದ್ದಿಮೆದಾರರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜ್ಯೋತಿ ಎಂ. ಹಿರೇಮಠ ಹಾಗೂ ಶಿಲ್ಪಾ ಮೆಡಿಕೇರ್ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕೆ.ಆರ್.ರಾಜಶ್ರೀ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.