ಧಾರವಾಡ: ನೂರಾರು ವರ್ಷದ ಹಿಂದೆ ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಬದುಕಬೇಕೆನ್ನುವ ರೀತಿ ಇತ್ತು. ಆದರೆ, ಪ್ರಸ್ತುತ ಮಹಾತ್ಮರ ಹೋರಾಟದ ಫಲವಾಗಿ ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗಿ ಸಾಧನೆ ಮಾಡುತ್ತಿದ್ದಾಳೆ ಎಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪನಿರ್ದೇಶಕಿ ಜಯಶ್ರೀ ಕಾರೇಕರ ಹೇಳಿದರು.ಕರ್ನಾಟಕ ರಾಜ್ಯ ನೌಕರರ ಸಂಘದ ಸಭಾಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರುಷ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಮಹಿಳಾ ಶಕ್ತಿಯೇ ಕಾರಣ. ಪುರುಷ ಮಹಿಳೆ ಎಂಬ ಭೇದ-ಭಾವವಿಲ್ಲದೆ ಮುನ್ನೆಡೆದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಮಹಿಳೆ ಕೌಟುಂಬಿಕ ಬದುಕಿನ ಕಾರ್ಯ ನಿರ್ವಹಿಸುವ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಲ್ಲಿರುವ ತಾಳ್ಮೆ, ಸಹನೆಯ ಕಾರಣದಿಂದ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಶಿಕ್ಷಕರ ಸಂಘದ ಬೈಲಾದಲ್ಲಿ ಮಹಿಳಾ ಶಿಕ್ಷಕಿಯರಿಗೆ ಶೇ. 33ರಷ್ಟು ಮಹಿಳಾ ಮೀಸಲಾತಿ ನೀಡಿದ ಏಕೈಕ ಸಂಘ ಇದಾಗಿದ್ದು, ಇಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶ ಹಾಗೂ ಸ್ವಾತಂತ್ರ ನೀಡಲಾಗಿದೆ ಎಂದರು.
ಶಹರ ಘಟಕದ ಅಧ್ಯಕ್ಷಾರಾದ ಶಾಂತಾ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ, ವೈ.ಎಚ್. ಬಣವಿ, ರಾಜಶೇಖರ ಹೊನ್ನಪ್ಪನವರ, ಅಕ್ಬರಅಲಿ ಸೋಲಾಪೂರ, ಅಯ್ಯುಬ್ ಶೇಖ್, ಎನ್.ಸಿ. ಪಾಟೀಲ, ಅಶೋಕ ಎನ್.ವೈ. ವೀಣಾ ಹೊಸಮನಿ, ಬಿ.ಐ. ಮನಗುಂಡಿ ವೇದಿಕೆಯಲ್ಲಿದ್ದರು. ರಮೇಶ ಲಿಂಗದಾಳ ಪ್ರಾಸ್ತಾವಿಕ ಮಾತನಾಡಿದರು. ಎಂ.ಆರ್. ಕಬ್ಬೇರ ನಿರೂಪಿಸಿದರು. ಎಂ.ಸಿ. ಎಲಿಗಾರ ವಂದಿಸಿದರು. 300ಕ್ಕೂ ಹೆಚ್ಚು ಮಹಿಳಾ ಶಿಕ್ಷಕಿಯರನ್ನು ಸತ್ಕರಿಸಲಾಯಿತು.