- ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾನೂನು ಸೂರಿನಡಿ ಮಹಿಳೆಯರಿಗೆ ರಕ್ಷಣೆ ಇದ್ದು ಮಹಿಳೆಯರು ಅಂತಹ ಕಾನೂನು ಬಳಸಿಕೊಳ್ಳಬೇಕು ಎಂದು ಎನ್.ಆರ್.ಪುರದ ಹಿರಿಯ ವಕೀಲೆ ಸುಮಾ ಸುರೇಶ್ ಕುಮಾರ್ ತಿಳಿಸಿದರು.ಶುಕ್ರವಾರ ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಹಿಳೆಯರಿಗೆ ಕಾನೂನು ಅರಿವು ಬಗ್ಗೆ ಉಪನ್ಯಾಸ ನೀಡಿದರು. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕಾಗಿ ರುವುದು ಪೋಷಕರ ಜವಾಬ್ದಾರಿ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದಿದ್ದರೆ ಮುಂದೆ ಅದೇ ಮಕ್ಕಳು ದೊಡ್ಡವರಾದ ಮೇಲೆ ಸಮಾಜಕ್ಕೆ ಮಾರಕ ಶಕ್ತಿಯಾಗಬಹುದು ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಂದ್ಯ ಹೆಗಡೆ ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳ ಮದ್ಯದಿಂದ ಹೊರ ಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಒಕ್ಕೂಟದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮಹಿಳೆಯರು ಭಾಗವಹಿಸಬೇಕು. ಒಕ್ಕೂಟದಿಂದ ಸಾಲ ಪಡೆದಿರುವುದನ್ನು ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಬಳಸ ಬೇಕು ಎಂದು ಕರೆ ನೀಡಿದರು. ಅತಿಥಿಯಾಗಿದ್ದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ಮಾದಕ ಮುಕ್ತ ಕರ್ನಾಟಕ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಮಾದಕ ವಸ್ತುಗಳ ವ್ಯಸನದಿಂದ ಸಮಾಜದಲ್ಲಿ ಅನೇಕ ದುರ್ಘಟನೆಗಳು ಸಂಭವಿಸುತ್ತಿದೆ ಎಂದರು. ಸಂಜೀವಿನಿ ಒಕ್ಕೂಟದ ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ ಮಾತನಾಡಿ, ಸಂಜೀವಿನಿ ಒಕ್ಕೂಟಗಳು ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಮುಂದಾಗಬೇಕು. ಒಕ್ಕೂಟಗಳು ಕೇವಲ ಸಾಲ, ಸೌಲಭ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆದಾಯೋತ್ಪನ್ನ ಚಟುವಟಿಕೆಗಳ ಬಗ್ಗೆಯೂ ಗಮನ ನೀಡಬೇಕು. ಪ್ರಸ್ತುತ 38 ಸಂಘಗಳಿವೆ. ಇನ್ನೂ 50 ಸಂಘ ಸೇರ್ಪಡೆಗೊಳ್ಳಬೇಕು. ವಾರ್ಷಿಕ ₹10 ರಿಂದ ₹15 ಲಕ್ಷ ಆದಾಯ ತರುವ ಕೆಲಸ ಆಗಬೇಕು ಎಂದರು. ವಲಯ ಮೇಲ್ವೀಚಾರಕ ಚೇತನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಬಿಕೆ ಶಾಲಿ ಅವರು ವಾರ್ಷಿಕ ಜಮಾ ಮತ್ತು ಖರ್ಚು ಮಂಡಿಸಿದರು. ಮಾದಕ ವಸ್ತುಗಳ ದಾಸರಾಗದಂತೆ ಪ್ರತಿಜ್ಞಾ ವಿಧಿ ಬೋದಿಸಲಾಯಿತು.ಇದೇ ಸಂದರ್ಭದಲ್ಲಿ ಹಿರಿಯ ವಕೀಲೆ ಸುಮಾ ಸುರೇಶ್ ಕುಮಾರ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಅವರನ್ನು ಗೌರವಿಸಲಾಯಿತು. ಅತಿಥಿಗಳಾಗಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಶೈಲಾ ಮಹೇಶ್, ಚಂದ್ರಶೇಖರ್, ಎ.ಬಿ.ಮಂಜುನಾಥ್, ಆರೋಗ್ಯ ಇಲಾಖೆ ಆಪ್ತ ಸಮಾಲೋಚಕಿ ಸುಜಾತಾ, ಕೃಷಿ ಸಖಿ ಮೇರಿ, ಒಕ್ಕೂಟದ ಪದಾಧಿಕಾರಿ ಸುಮಿತ್ರ,ವಿನೋದ,ಶೈನಿ ಇದ್ದರು.