ಹಳಿಯಾಳ: ಮನೆಯೊಂದಿಗೆ ದೇಶವನ್ನು ಸಮರ್ಥವಾಗಿ ನಡೆಸುವ ಸಾಮರ್ಥ್ಯವನ್ನು ಹೊಂದಿದ ಮಹಿಳೆಯು ಇಂದು ತನ್ನ ಸಾಧನೆಗಳನ್ನು, ಸ್ವತಂತ್ರವಾಗಿ ನಿರ್ಣಯಿಸುವ, ತನಗಾಗಿ ಸಮಯವನ್ನು ಮೀಸಲಿಡುವ, ತನ್ನನ್ನು ಪ್ರೀತಿಸುವ ಹಾಗೂ ಗೌರವಿಸುವ ಅವಶ್ಯತೆಯಿದೆ ಎಂದು ಉಪನ್ಯಾಸಕಿ ವಂದನಾ ಗೌಡ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಜಾತಾ ಹಂಡಿ ಮಾತನಾಡಿ, ಹೆಣ್ಣು ತನ್ನ ಶಕ್ತಿ ಸಾಮರ್ಥ್ಯದಿಂದ ಸಮಾಜದಲ್ಲಿ ತನ್ನ ಗುರುತನ್ನು ಮೂಡಿಸುತ್ತಿದ್ದಾಳೆಯೇ ಹೊರತು ಕರುಣೆಯಿಂದ ಅಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ಹೆಣ್ಣು ಸೃಷ್ಟಿ, ಶಕ್ತಿ, ಜಗತ್ ಪಾಲನೆಯ ಮಾತೆ. ಇಂದು ಎಲ್ಲ ಕ್ಷೇತ್ರದಲ್ಲಿ ಸ್ತ್ರೀಯರು ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಿದ್ದಾರೆ ಎಂದರು.ಕಾಲೇಜಿನ ಕ್ರೀಡಾ ನಿರ್ದೇಶಕ ಮಲ್ಲಿಕಾರ್ಜುನ ಕಾಜಗಾರ ಮಹಿಳೆಯರ ಕುರಿತು ಹಾಡಿದರು. ಪದವಿ ಕಾಲೇಜು ಸಂಯೋಜಕಿ ದೀಪಾ ನಾಯ್ಕ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಶಾಂತಾರಾಮ ಚಿಬುಲಕರ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಮಹಾವಿದ್ಯಾಲಯದ ಮಹಿಳಾ ಸಿಬ್ಬಂದಿಗೆ ವಿಶೇಷ ಕ್ರೀಡೆಗಳನ್ನು ನಡೆಸಲಾಯಿತು.