ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶಿಕ್ಷಕಿಯರಿಗಾಗಿ ವಿವಿಧ ಮನೋರಂಜನಾ ಆಟಗಳನ್ನು ಆಡಿಸಿ ಬಹುಮಾನ ನೀಡುತ್ತಿರುವುದು ವೃತ್ತಿ ಜೀವನದ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಪುಷ್ಠಿ ನೀಡುತ್ತದೆ. ಅಜ್ಜಿಯಾಗಿ, ತಾಯಿಯಾಗಿ, ಗುರುವಾಗಿ, ಅಕ್ಕಳಾಗಿ, ತಂಗಿಯಾಗಿ, ಹೆಂಡತಿಯಾಗಿ, ಗೆಳತಿಯಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಮಹಿಳೆಯ ಶಕ್ತಿ ನಮ್ಮ ಜೊತೆಗಿರುತ್ತದೆ. ಭಾರತ್ ಸ್ಕೌಟ್ಸ್ ಗೈಡ್ಸ್ ಶಿಸ್ತು, ಸಂಯಮ, ಸೇವೆ ಕಲಿಸುವುದರ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಕಲಿಸುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ಮಹಿಳೆ ಹೆಚ್ಚೆಚ್ಚು ಸಬಲೀಕರಣಗೊಂಡಷ್ಟು ಸಾಮಾಜಿಕ ಸ್ವಾಸ್ಥ್ಯ ಸದೃಢಗೊಂಡು ಕೌಟುಂಬಿಕ ಔನತ್ಯ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಅಭಿಪ್ರಾಯಪಟ್ಟರು.ಅವರು ಭಾರತ್ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಪಟ್ಟಣದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಅವರ ನೇತೃತ್ವದಲ್ಲಿ ಆಲೂರು ತಾಲೂಕಿನಲ್ಲಿ ಸ್ಕೌಟ್ಸ್ ಗೈಡ್ಸ್ ಉತ್ತಮವಾಗಿ ಸಾಗುತ್ತಿದೆ. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶಿಕ್ಷಕಿಯರಿಗಾಗಿ ವಿವಿಧ ಮನೋರಂಜನಾ ಆಟಗಳನ್ನು ಆಡಿಸಿ ಬಹುಮಾನ ನೀಡುತ್ತಿರುವುದು ವೃತ್ತಿ ಜೀವನದ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಪುಷ್ಠಿ ನೀಡುತ್ತದೆ. ಅಜ್ಜಿಯಾಗಿ, ತಾಯಿಯಾಗಿ, ಗುರುವಾಗಿ, ಅಕ್ಕಳಾಗಿ, ತಂಗಿಯಾಗಿ, ಹೆಂಡತಿಯಾಗಿ, ಗೆಳತಿಯಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಮಹಿಳೆಯ ಶಕ್ತಿ ನಮ್ಮ ಜೊತೆಗಿರುತ್ತದೆ. ಭಾರತ್ ಸ್ಕೌಟ್ಸ್ ಗೈಡ್ಸ್ ಶಿಸ್ತು, ಸಂಯಮ, ಸೇವೆ ಕಲಿಸುವುದರ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಕಲಿಸುತ್ತಿದೆ ಎಂದರು.ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳಾ ಕಾರ್ಮಿಕರ ಸಮಾನತೆಯ ಹಕ್ಕುಗಳಿಗಾಗಿ ಲಂಡನ್ನಿನಲ್ಲಿ ಹದಿನೆಂಟನೇ ಶತಮಾನದಲ್ಲಿ ಪ್ರಾರಂಭವಾದ ಹೋರಾಟ ತದನಂತರ ವಿವಿಧ ಆಯಾಮಗಳನ್ನು ಪಡೆದುಕೊಂಡು ಇಂದು ಜಾಗತಿಕವಾಗಿ ವ್ಯಾಪಿಸಿದೆ. ಅವಕಾಶ, ಶಿಕ್ಷಣ, ಉದ್ಯೋಗ, ಸಾಮಾಜಿಕ ವ್ಯವಸ್ಥೆಯಲ್ಲಿ ಲಿಂಗತಾರಮ್ಯ ಮಾಡುವುದರಿಂದಲೇ ಹೋರಾಟದ ಅನಿವಾರ್ಯತೆ ಎದುರಾಗುತ್ತದೆ. ಇಂದು ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಆಟೋ ಚಾಲನೆ, ಪೌರಕಾರ್ಮಿಕ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ರಾಷ್ಟ್ರಪತಿಯಿಂದ ಹಿಡಿದು ಪೈಲಟ್ ಹಾಗೂ ಬಾಹ್ಯಾಕಾಶದಲ್ಲಿ ಸಂಶೋಧನೆ ಮಾಡುವ ಹಂತದವರೆಗೂ ಛಾಪನ್ನು ಮೂಡಿಸಿ ಸಾಧಿಸಿ ತೋರಿಸಿದ್ದಾಳೆ. ಸರೋಜಿನಿ ನಾಯ್ಡು, ಇಂದಿರಾಗಾಂಧಿ, ಸಿರಿಮಾವೋ ಭಂಡಾರನಾಯಕಿ, ಪ್ರತಿಭಾ ಪಾಟೀಲ, ದ್ರೌಪದಿ ಮುರ್ಮು, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಸೇರಿದಂತೆ ಸಹಸ್ರಾರು ಸಾಧಕಿಯರು ನಮ್ಮ ಮುಂದಿದ್ದಾರೆ. ಇಷ್ಟೇ ಅಲ್ಲದೇ ಕ್ರೀಡೆ, ಸಂಗೀತ, ಸಿನೆಮಾ, ರಂಗಭೂಮಿ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ್ದಾಳೆ. ಭಾರತೀಯ ಸಂವಿಧಾನ ಎಲ್ಲರಿಗೂ ತಮ್ಮದೇ ಆದ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಈ ಅವಕಾಶಗಳನ್ನು ಬಳಸಿಕೊಂಡು ನಮ್ಮ ಜೀವನವನ್ನು ಔನತ್ಯಗೊಳಿಸಿಕೊಳ್ಳಬೇಕೆಂದರು.ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಕೇಂದ್ರದ ಕಿರಿಯ ತರಬೇತಿ ಅಧಿಕಾರಿ ಸಿ.ಎಸ್. ಶಿವಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ನಿಜವಾದ ಸಮಾಜದ ಪ್ರಗತಿಯಾಗುವುದೇ ಮಹಿಳೆಯರ ಕಾರ್ಯಕ್ಷಮತೆಯಿಂದ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಪವಿತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತ್ ಸ್ಕೌಟ್ಸ್, ಗೈಡ್ಸ್ ನಮ್ಮ ಶಾಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಮಕ್ಕಳ ವಿವಿಧ ಚಟವಟಿಕೆಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಕೇಂದ್ರದ ಕಿರಿಯ ತರಬೇತಿ ಅಧಿಕಾರಿ ಸಿ.ಎಸ್. ಶಿವಕುಮಾರ್, ವಿಶ್ವೇಶ್ವರಯ್ಯ ಐಟಿಐ ಕಾಲೇಜಿನ ರಂಗೇಗೌಡ, ಮುಖ್ಯ ಶಿಕ್ಷಕಿ ಪವಿತ್ರ, ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ರಾಮಚಂದ್ರು, ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ, ಗೈಡ್ ಕ್ಯಾಪ್ಟನ್ಸ್ ರೋಹಿಣಿ, ರೂಹಿ, ಬೈರಾಪುರ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ಸ್ ಶಿಲ್ಪಕೃತಿ, ಸೌಮ್ಯ; ಬೈರಾಪುರ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ಸ್ ಸುಮಿತ್ರ, ರಂಜಿತಾ ಹಾಗೂ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ಕ್ಯಾಪ್ಟನ್ ಅಶ್ವಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಮನೋರಂಜನಾ ಆಟಗಳಲ್ಲಿ ಜಯಿಸಿದ ಶಿಕ್ಷಕಯರಿಗೆ ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ, ಗೈಡ್ ನಾಯಕಿಯರಾದ ರೋಹಿಣಿ ಹಾಗೂ ರೂಹಿ ಮತ್ತು ಕಬ್ ಮಾಸ್ಟರ್ ರಾಮಚಂದ್ರುರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.