ಕನಕಗಿರಿ: ಸಾಮೂಹಿಕ ಶೌಚಾಲಯ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ತಾಲೂಕಿನ ಹಿರೇಖೇಡ ಗ್ರಾಮದ ಮಹಿಳೆಯರು ಸೋಮವಾರ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ಸರ್ಕಾರಿ ಭೂಮಿಯಲ್ಲಿ ನಾವು ಬಹಿರ್ದೆಸೆಗೆ ಹೋಗುತ್ತಿದ್ದೆವು. ಈಗ ಕೆಲವರು ಭೂಮಿ ನಮ್ಮದೆಂದು ಗಿಡಗಂಟಿಗಳನ್ನು ಕಿತ್ತೆಸೆದಿದ್ದರಿಂದ ಹೆಣ್ಣುಮಕ್ಕಳ ಶೌಚಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಮಹಿಳೆಯರ ಸಾಮೂಹಿಕ ಶೌಚಾಲಯ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಮಹಿಳೆಯರು ಮನವಿ ಮಾಡಿದರು.
ಈ ಕುರಿತು ಗ್ರಾಮ ಆಡಳಿತಾಧಿಕಾರಿ ಶಿವರಾಜ ಭೋವಿ ಮಾತನಾಡಿ, ಹಿರೇಖೇಡ ಗ್ರಾಮದ ಮಹಿಳೆಯರು ಶೌಚಕ್ಕಾಗಿ ಉಪಯೋಗಿಸುತ್ತಿದ್ದ ಭೂಮಿಯನ್ನು 1993ರಲ್ಲಿಯೇ ಗ್ರಾಮದ ಫಲಾನುಭವಿ ಕುಟುಂಬಕ್ಕೆ ನೀಡಲಾಗಿದೆ. ಭೂಮಿ ವಾರಸುದಾರರು ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ. ಮಹಿಳೆಯರ ಸಾಮೂಹಿಕ ಶೌಚಾಲಯ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಪ್ರತಿಭಟನಾಕಾರರಿಗೆ ಮೇಲಾಧಿಕಾರಿಗಳನ್ನು ಭೇಟಿಯಾಗಲು ತಿಳಿಸಿದ್ದೇನೆ ಎಂದರು.ಪ್ರತಿಭಟನಾ ಸ್ಥಳಕ್ಕೆ ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ, ಗ್ರಾಮ ಆಡಳಿತಾಧಿಕಾರಿ ಶಿವರಾಜ ಭೋವಿ, ತಾಲೂಕು ಭೂಮಾಪಕ ರಮೇಶ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.