ಆನಂದಗಲ್‌ನಲ್ಲಿ ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಮಹಿಳೆಯರ ಆಗ್ರಹ

KannadaprabhaNewsNetwork |  
Published : May 13, 2024, 12:04 AM IST
12ಕೆಪಿಕೆವಿಟಿ01 | Kannada Prabha

ಸಾರಾಂಶ

ಕವಿತಾಳ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿದ ಆನಂದಗಲ್ ಗ್ರಾಮದ ಮಹಿಳೆಯರು ಅಕ್ರಮ ಮದ್ಯ ಮಾರಾಟ ನಿಯಂತ್ರಿಸಬೇಕು ಎಂದು ದೂರು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಆನಂದಗಲ್ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಎಸ್ಪಿ ಕಚೇರಿಗೆ ಪಾದಯಾತ್ರೆ ನಡೆಸಿ, ಪ್ರತಿಭಟಿಸುವುದಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಆನಂದಗಲ್ ಗ್ರಾಮದಿಂದ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿದ 20-30 ಜನ ಮಹಿಳೆಯರು, ಪೊಲೀಸರ ಮುಂದೆ ತಮ್ಮ ಅಳಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಗಂಡಸರು ಹೊಡೆದು ಬಡಿದು ಮಹಿಳೆಯರ ಹತ್ತಿರ ಹಣ ಕಿತ್ತುಕೊಂಡು ಕುಡಿದು ಹಾಳು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಮನೆ ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಹಗಲು ರಾತ್ರಿ ಕುಡಿದು ರಸ್ತೆಯಲ್ಲಿ ಬೀಳುವ ಗಂಡಸರನ್ನು ಮನೆಯವರು ಹೊತ್ತುಕೊಂಡು ಮನೆಗೆ ಒಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಮತ್ತು ಪೊಲೀಸರು ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಸರ್ಕಾರ ನೀಡುವ ಗೃಹಲಕ್ಷ್ಮೀ ಹಣವನ್ನು ಹೊಡೆದು ಬಡಿದು ಕಸಿಯುತ್ತಿರುವ ಗಂಡಸರು ಕುಡಿದು ಹಾಳು ಮಾಡುತ್ತಿದ್ದಾರೆ. ಕುಡಿತದ ಸತ್ತವರ ಸಂಖ್ಯೆಯು ಕಡಿಮೆ ಇಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಗಂಡಸರು, ಸಣ್ಣ ಸಣ್ಣ ಪ್ರಾಯದ ಹುಡುಗರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು, ಅಕ್ರಮ ಮಾರಾಟ ಮಾಡುತ್ತಿರುವವರು ಹಣ ಇಲ್ಲದಿದ್ದರೂ ಮದ್ಯ ನೀಡುತ್ತಿದ್ದಾರೆ. ರಸ್ತೆಯಲ್ಲಿ ಕುಡಿದು ತೂರಾಡುವ ಗಂಡಸರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಗ್ರಾಮದಲ್ಲಿ ಮಹಿಳೆಯರಿಗೆ ಮರ್ಯಾದೆ ಇಲ್ಲದಂತಾಗಿ, ಕೂಲಿ ನಾಲಿ ಮಾಡಿ ದುಡಿದು ತಂದು ಹಾಕುತ್ತಿದ್ದೇವೆ. ದುಡಿದ ಹಣವನ್ನು ಕಸಿದು ಕುಡಿತಕ್ಕೆ ಬಳಸುತ್ತಿದ್ದಾರೆ. ಹೀಗಾದರೆ ಮಕ್ಕಳ ಭವಿಷ್ಯದ ಗತಿ ಏನು ಎಂದು ಮಹಿಳೆಯರು ಕಣ್ಣೀರು ಹಾಕಿದರು.

ಸಣ್ಣ ಗ್ರಾಮದಲ್ಲಿ ಹಗಲು ರಾತ್ರಿ ಮದ್ಯ ದೊರಕಿದರೆ ಕುಡಕರಿಗೆ ಅನುಕೂಲವಾಗಿದೆ. ಮಹಿಳೆಯರು ಮನೆ ಮತ್ತು ಮಾನ ಕಾಪಾಡಿಕೊಳ್ಳಲು ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಣವಾಗಿದೆ ಎಂದು ದೂರಿದರು.

ಮಹಿಳೆಯರ ದೂರು ಆಧರಿಸಿ ಗ್ರಾಮಕ್ಕೆ ಭೇಟಿ ನೀಡುವಷ್ಟರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರು ಬಂದ್ ಮಾಡಿದ್ದರು, ಅವರಿಗೆ ಸೂಚನೆ ನೀಡಲಾಗಿದ್ದು ಮತ್ತೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ ಐ ಎಚ್.ಬಸ್ಸಪ್ಪ ತಿಳಿಸಿದರು.

ಚಂದ್ರಕಲಾ, ಅಕ್ಷತಾ, ಲಕ್ಷ್ಮಿ, ಶಂಕ್ರಮ್ಮ ಮಹಾದೇವಮ್ಮ ಪಾರ್ವತೆಮ್ಮ, ಸೌಭಾಗ್ಯ ವೀರಭದ್ರಮ್ಮ, ಅಕ್ಕಮ್ಮ, ಪಂಪಮ್ಮ ಶರಣಪ್ಪ ಕ್ಯಾದಗುಂಪಿ, ಶರಣಪ್ಪ ಕೆ ಮಾಜಿ ಗ್ರಾಮ ಪಂ ಸದಸ್ಯರು, ಬಸನಗೌಡ ಮಾಲಿ ಪಾಟೀಲ್, ವಿಜಯ್ ಪಾಟೀಲ್, ವಿಜಯ್ ವನ್ನಳಿ , ಮಲ್ಲಪ್ಪ ವನ್ನಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!