ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವದ ಜಾತ್ರಾ ಸಮಿತಿಯಿಂದ ಶನಿವಾರ ಮಹಿಳಾ ಕ್ರೀಡಾಕೂಟ ನಡೆಯಿತು.ಮಹಿಳಾ ಕ್ರೀಡಾಕೂಟಕ್ಕೆ ಸ್ಮಿತಾ ಪುಟ್ಟಣ್ಣಯ್ಯ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಭಾಗವಹಿಸಿ ಗೆಲುವಿಗಾಗಿ ಸೆಣಸಾಟ ನಡೆಸುವ ಜತೆಗೆ ಕ್ರೀಡಾಸ್ಫೂರ್ತಿ ಮೆರೆದರು.
ಮಹಿಳೆಯರಿಗೆ ತಲೆ ಮೇಲೆ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ನಿಂಬೆಹಣ್ಣು ಇಟ್ಟು ಸ್ಪೂನ್ ಕಚ್ಚಿ ಓಡುವ ಸ್ಪರ್ಧೆ, ಮ್ಯೂಜಿಕಲ್ ಚೇರ್, ರಂಗೋಲಿ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು.ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 10 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಸ್ಪರ್ಧಿಗಳು ಹಗ್ಗ ಎಳೆಯುವ ಮೂಲಕ ಗೆಲುವಿಗಾಗಿ ಪೈಪೋಟಿ ನಡೆಸಿದರು. ಮ್ಯೂಜಿಕಲ್‌ಚೇರ್ ಸ್ಪರ್ಧೆಯಲ್ಲಿ ರೈತಸಂಘದ ನಾಯಕಿ ನಂದಿನಿ ಜಯರಾಂ ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದರು.
ತಲೆಮೇಲೆ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಕೆಲವು ಮಹಿಳೆಯರು ಕೆಳಗೆ ಬಿದ್ದು ಗಾಯಮಾಡಿಕೊಂಡು ಘಟನೆಯೂ ಸಹ ನಡೆಯಿತು. ನಿತ್ಯ ನಾಲ್ಕು ಗೋಡೆಗಳ ಮಧ್ಯೆ ಇದ್ದು ಅಡುಗೆ, ಮನೆಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮಹಿಳೆಯರು ಶನಿವಾರ ಬೇಬಿಬೆಟ್ಟದ ಮಹಿಳಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಮನಸ್ಸನ್ನು ಉಲ್ಲಾಸಗೊಳಿಸಿಕೊಂಡರು.ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ವೈಷ್ಣವಿ ಪಾಂಡವಪುರ ಹಾಗೂ ನರಕರೇಶ್ವರ ಬೇವಿನಕುಪ್ಪೆ ತಂಡಗಳ ನಡುವೆ ಸಾಕಷ್ಟು ಪೈಪೋಟಿ ನಡೆದು ವೈಷ್ಣವಿ ತಂಡ ಗೆಲುವು ಸಾಧಿಸಿತು.
ಮ್ಯೂಜಿಕಲ್‌ಚೇರ್ ಸ್ಪರ್ಧೆ: ಅನಿತಾ ಕ್ಯಾತನಹಳ್ಳಿ (ಪ್ರಥಮ), ಲಕ್ಷ್ಮೀ ಹೊನಗಾನಹಳ್ಳಿ(ದ್ವಿತೀಯ), ಕೆ.ಎಸ್.ನಂದಿನಿ ಜಯರಾಮ್(ತೃತೀಯ), ಬಿಂದಿಗೆ ಓಟದ ಸ್ಪರ್ಧೆ - ತೇಜಸ್ವಿನಿ ಹರವು(ಪ್ರಥಮ), ಅರ್ಪಿತ ಚಿನಕುರಳಿ (ದ್ವಿತೀಯ), ರಮ್ಯ ಬಸ್ತಿಹಳ್ಳಿ(ತೃತೀಯ)., ಲೆಮೆನ್ ಆಂಡ್ ಸ್ಪೂನ್ ಸ್ಪರ್ಧೆ: ಪೂಜಾ ವಿ.ಕೆ.ಕೊಪ್ಪಲು(ಪ್ರಥಮ), ಕವಿತಾ ಚಿನಕುರಳಿ(ದ್ವಿತೀಯ), ಪವಿತ್ರ ಚಿನಕುರಳಿ(ತೃತೀಯ)., ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ: ವೈಷ್ಣವಿ ಪಾಂಡವಪುರ(ಪ್ರಥಮ), ನರಕರೇಶ್ವರ ಬೇವಿನಕುಪ್ಪೆ(ದ್ವಿತೀಯ) ರಂಗೋಲಿ ನಂದಿನಿ ವಿ.ಚಿನಕುರಳಿ (ಪ್ರಥಮ), ನಂದಿನಿ ಸುರೇಶ್ ಹೊಸಸಾಯಪನಹಳ್ಳಿ (ದ್ವಿತೀಯ), ಜ್ಯೋತಿ ಆರ್.ಕೆ.ಕನಗನಹಳ್ಳಿ(ತೃತೀಯ).