ಇನ್ನು ಕಡಿಮೆಯಾಗ್ತಿಲ್ಲ ಮಹಿಳೆಯರ ಶಕ್ತಿ

KannadaprabhaNewsNetwork | Published : Nov 16, 2023 1:17 AM

ಸಾರಾಂಶ

ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ ಆರು ತಿಂಗಳಾದರೂ ಮಹಿಳೆಯರ ಶಕ್ತಿ ಮಾತ್ರ ಕ್ಷೀಣಿಸುತ್ತಿಲ್ಲ.ಇದೀಗ ಇರುವ ಬಸ್ಗಳಲ್ಲಿ ನಿಭಾಯಿಸುವುದು ಕಷ್ಟವಾಗುತ್ತಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಹಿಳೆಯರು ಓಡಾಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ ಆರು ತಿಂಗಳಾದರೂ ಮಹಿಳೆಯರ ಶಕ್ತಿ ಮಾತ್ರ ಕ್ಷೀಣಿಸುತ್ತಿಲ್ಲ.

ಇದೀಗ ಇರುವ ಬಸ್‌ಗಳಲ್ಲಿ ನಿಭಾಯಿಸುವುದು ಕಷ್ಟವಾಗುತ್ತಿದೆ. ಹೊಸ ಬಸ್‌ ಖರೀದಿಸಿ, ಇನ್ನಷ್ಟು ನೌಕರರನ್ನು ನೇಮಿಸಿಕೊಳ್ಳಿ ಎಂಬ ಬೇಡಿಕೆಯನ್ನು ನೌಕರರು ಒಕ್ಕೊರಲಿನಿಂದ ಸರ್ಕಾರದ ಮುಂದಿಟ್ಟಿದ್ದಾರೆ.

ಜೂ.11ರಿಂದ ಈ ಯೋಜನೆ ಪ್ರಾರಂಭವಾಗಿದೆ. ಆಗಿನಿಂದ ಈ ವರೆಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ 9 ವಿಭಾಗಗಳಲ್ಲಿ ಬರೋಬ್ಬರಿ 21.76 ಕೋಟಿ ಮಹಿಳೆಯರು ಪ್ರಯಾಣಿಸಿದ್ದರೆ, ಬರೋಬ್ಬರಿ ₹556.41 ಕೋಟಿ ಇವರ ಟಿಕೆಟ್ ಮೌಲ್ಯವಾಗಿದೆ.

ಶಕ್ತಿ ಯೋಜನೆ ಪ್ರಾರಂಭವಾಗುವ ಮುನ್ನ ಪ್ರತಿ ದಿನ ವಾಯವ್ಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬರೋಬ್ಬರಿ 17.5 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಶೇ. 40ರಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭವಾದ ಮೇಲಿಂದ ಬರೋಬ್ಬರಿ ಪ್ರಯಾಣಿಕರ ಸಂಖ್ಯೆ 25ರಿಂದ 26ಲಕ್ಷಕ್ಕೇರಿದೆ. ಇದರಲ್ಲಿ ಮಹಿಳೆಯರ ಸಂಖ್ಯೆ ಶೇ. 60ಕ್ಕೇರಿದೆ. ಅಂದರೆ 15ರಿಂದ 15.6 ಲಕ್ಷ ಜನ ಮಹಿಳೆಯರೇ ಇದ್ದಾರೆ.

ಬಸ್‌ ಸಂಖ್ಯೆ ಹೆಚ್ಚು:

ಇನ್ನು ಶಕ್ತಿ ಯೋಜನೆ ಪ್ರಾರಂಭವಾಗುವುದಕ್ಕೂ ಮುನ್ನ ಸಂಸ್ಥೆಯಡಿ 4555 ಬಸ್‌ಗಳು (ಸಾಮಾನ್ಯ ಬಸ್‌) 35147 ಟ್ರಿಪ್‌ಗಳಲ್ಲಿ ಸಂಚರಿಸುತ್ತಿದ್ದವು. ಶಕ್ತಿ ಯೋಜನೆ ಜಾರಿಯಾದ ಬಳಿಕ 4581 ಬಸ್‌ (26 ಬಸ್‌ ಹೆಚ್ಚುವರಿ) 36 ಸಾವಿರಕ್ಕೂ ಅಧಿಕ ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. ಅಂದರೆ 900ಕ್ಕೂ ಅಧಿಕ ಟ್ರಿಪ್‌ಗಳನ್ನು ಮಾಡಲಾಗುತ್ತಿದೆ. ಹಾಗಂತ ಹೆಚ್ಚುವರಿ ಸಿಬ್ಬಂದಿಗಳೇನು ಇಲ್ಲ. ಇದ್ದ ಸಿಬ್ಬಂದಿಗಳೇ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ.

ಸಂಸ್ಥೆಯ ಸಾಮರ್ಥ್ಯಕ್ಕೆ ಅನುಸಾರವಾಗಿ ಹೆಚ್ಚುವರಿ ಟ್ರಿಪ್‌ ಹಾಗೂ ಬಸ್‌ಗಳನ್ನು ಬಿಡಲಾಗುತ್ತಿದೆಯಾದರೂ ಬಸ್‌ಗಳ ರಶ್‌ ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಸೀಟ್‌ಗಾಗಿ ಈಗಲೇ ಮಹಿಳೆಯರ ನಡುವೆ ಜಡೆ ಜಗ್ಗಾಟ, ಬಡಿದಾಟಗಳೆಲ್ಲ ಮಾಮೂಲಿ ಎಂಬಂತಾಗಿದೆ.

ಪರಿಹಾರವೇನು?

ಇದಕ್ಕೆ ಸೂಕ್ತ ಹೆಚ್ಚುವರಿ ಸಿಬ್ಬಂದಿ ಬೇಕು. ಜತೆಗೆ ಬಸ್‌ಗಳ ಸಂಖ್ಯೆ ಹೆಚ್ಚಾಗಬೇಕು. ಅಂದಾಗ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯ. ಕಾರಣ ಕನಿಷ್ಠವೆಂದರೂ ಸಂಸ್ಥೆಗೆ 1000 ಬಸ್‌ಗಳನ್ನು ಖರೀದಿಸಲು ಹಾಗೂ 2000 ನೌಕರರನ್ನು ನೇಮಿಸಿಕೊಳ್ಳಲು ಸರ್ಕಾರ ಅನುಮೋದನೆ ನೀಡಬೇಕು. ಅಂದಾಗ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ನೌಕರರ ವರ್ಗದ್ದು.

ಈಗಿರುವ ಬಸ್‌ಗಳ ಡಕೋಟಾ ಆಗಿವೆ. ಹೊಸ ಬಸ್‌ ಖರೀದಿಸಿದರೆ ಅನುಕೂಲವಾಗುತ್ತದೆ. ಜತೆಗೆ ಹೆಚ್ಚುವರಿ ಕಾರ್ಯ ಒತ್ತಡದಿಂದ ನೌಕರರು ಅಗತ್ಯ ವೇಳೆಯಲ್ಲೂ ರಜೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದಕಾರಣ ಸರ್ಕಾರ ನಮ್ಮ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಕೂಡ ಬರೆದಿದೆ.

ಶಕ್ತಿ ಯೋಜನೆಯಿಂದ ಸರ್ಕಾರಕ್ಕೇನೋ ಒಳ್ಳೆಯ ಹೆಸರು ಬರುತ್ತಿದೆ. ಆದರೆ, ಇದನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ನೌಕರರ ಬೇಡಿಕೆಗೆ ಸ್ಪಂದಿಸಬೇಕು ಎಂಬುದು ಪ್ರಜ್ಞಾವಂತರ ಅಂಬೋಣ.

Share this article