ಕನ್ನಡಪ್ರಭ ವಾರ್ತೆ ಮಂಡ್ಯ
ಖಾಸಗಿ ಫೈನಾನ್ಸ್ ನವರು ಸಾಲ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹೊಳಲು ಗ್ರಾಮ ಪಂಚಾಯ್ತಿ ಎದುರು ಸಾಲ ಪಡೆದ ವ್ಯಕ್ತಿಗಳು ನೇಣು ಕುಣಿಕೆ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅವಕಾಶ ನೀಡಿ ಎಂದು ಮಂಗಳವಾರ ಪ್ರತಿಭಟನೆ ನಡೆಸಿದರು.ಹಗ್ಗ, ಸೀರೆಗಳನ್ನು ಹಿಡಿದು ಗ್ರಾಮ ಪಂಚಾಯ್ತಿ ಎದುರು ಜಮಾಯಿಸಿದ ಸಾಲ ಪಡೆದ ಮಹಿಳೆಯರು ನಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮುಂಭಾಗದಲ್ಲಿಯೇ ಕುಣಿಕೆ ಮಾಡಿ ತೂಗು ಹಾಕಿದರು. ನಮಗೆ ಯಾರ ಹತ್ತಿರ ಅಥವಾ ಯಾವ ಅಧಿಕಾರಿಯ ಬಳಿ ಹೋಗಬೇಕೆಂದು ತಿಳಿಯುತ್ತಿಲ್ಲ, ಹಾಗಾಗಿ ನಮ್ಮೂರಿನ ಪಂಚಾಯ್ತಿಗೆ ಬಂದಿದ್ದೇವೆ ಎಂದು ಲತಾ, ದಿವ್ಯಾ, ರೇಣುಕಾ, ಸೌವ್ಯಾ, ರುಕ್ಮಿಣಿ ಅಳಲು ತೋಡಿಕೊಂಡರು.
ಕನ್ನಡಸೇನೆ ಸಂಘಟನೆಯ ಜಿಲ್ಲಾ ಸಂಚಾಲಕ ವೇಣುಗೋಪಾಲ್ ಮಾತನಾಡಿ, ಮೈಕ್ರೋ ಫೈನಾನ್ಸ್ ಸೇರಿದಂತೆ ವಿವಿಧ ಖಾಸಗಿ ಬ್ಯಾಂಕ್‌ನವರು ಹೊಳಲು ಗ್ರಾಮದಲ್ಲಿ ಕೂಲಿ ಮಾಡುತ್ತಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಲಕ್ಷಗಟ್ಟಲೆ ಸಾಲ ನೀಡಿದ್ದಾರೆ, ಅದನ್ನು ತೀರಿಸುವಂತೆ ಈಗ ಒತ್ತಾಯ ಹೇರುತ್ತಿದ್ದಾರೆ, ಸಾಲ ಪಡೆದಿರುವುದು ನಿಜ. ಅದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಸಾಲ ಕೊಡುವಾಗಲೂ ವಿವಿಧ ಖಾಸಗಿ ಕಂಪನಿಗಳು ಬಂದು ಮಹಿಳಾ ಸದಸ್ಯರನ್ನು ಗುಂಪು ಮಾಡಿಸಿಕೊಂಡು ನಂತರ ಬ್ಯಾಂಕ್‌ನಲ್ಲಿ ಅಕೌಂಟ್ ತೆರೆಯುವ ಮೂಲಕ ಲಕ್ಷ ಲಕ್ಷ ಹಣವನ್ನು ಸಾಲವಾಗಿ ನೀಡುತ್ತಾರೆ. ಕಂತಿನ ಪ್ರಕಾರ ಸಾಲದ ಹಣ ಪಾವತಿ ಮಾಡಲು ತಪ್ಪಿದರೆ ವಾರದ ಬಡ್ಡಿ ಅಥವಾ ಹದಿನೈದು ದಿನ ಅಥವಾ ಒಂದು ತಿಂಗಳ ಬಡ್ಡಿಗೆ ಬಡ್ಡಿ ಹಣ ಸೇರಿಸಿ ವಸೂಲು ಮಾಡಲು ನಿಲ್ಲುತ್ತಾರೆ. ಸಾಲ ಕೇಳಲು ಬಂದಾಗ ಅವಾಚ್ಯ ಶಬ್ಧಗಳಿಂದ ಫೈನಾನ್ಸ್ ವಸೂಲಿಗಾರರು ನಿಂದಿಸಿ ಭಯ ಹುಟ್ಟಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸ್:ಗ್ರಾಪಂ ಉಪಾಧ್ಯಕ್ಷ ನಾರಾಯಣಪ್ಪ, ಸದಸ್ಯರಾದ ರಾಜಶೇಖರ್, ಎಚ್.ಡಿ.ಪಲ್ಲವಿ ಸೇರಿದಂತೆ ಪಿಡಿಒ ಅವರು ನಾವೆಲ್ಲರೂ ನಿಮಗೆ ಬಂಬಲವಾಗಿದ್ಧೇವೆ, ಈ ಸಂಬಂಧ ಈಗಲೇ ಮೇಲಾಕಾರಿಗಳ ಗಮನಕ್ಕೆ ತಂದು ನಿಮ್ಮ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಟ್ಟರು.