ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಮಹಿಳೆಯರ ಪಾತ್ರ ಸ್ಮರಣೀಯ ಎಂದು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೂಡಕಂಡಿ ದಯಾನಂದ ಹೇಳಿದ್ದಾರೆ.ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರ್ನಾಟಕದ ಏಕೀಕರಣ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಮಹಿಳೆಯರು’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಬಗೆಯ ಚಳವಳಿ ನಡೆದಿದೆ. ಒಂದು ರಾಜ್ಯದೊಳಗಡೆ ಆದರೆ ಮತ್ತೊಂದು ರಾಷ್ಟ್ರ ಮಟ್ಟದಲ್ಲಿ ಆಗಿರುವುದು. ಎರಡರಲ್ಲೂ ಕರ್ನಾಟಕದ ಮಹಿಳೆಯರ ಪಾತ್ರ ಹಿರಿದಾದುದು. ತಮ್ಮ ಬದುಕು, ಬವಣೆ ಬದಿಗಿಟ್ಟು ಬ್ರಟಿಷರ ವಿರುದ್ಧ ಹೋರಾಟ ಮಾಡಿ ಜೈಲುವಾಸ ಅನುಭವಿಸಿದವರೂ ಇದ್ದಾರೆ. ಜಯಶ್ರೀ ದೇವಿ ಲಿಗಾಡೆ, ಕಿತ್ತೂರು ಚೆನ್ನಮ್ಮ, ಯಶೋಧರಮ್ಮ ದಾಸಪ್ಪ, ರಾಣಿ ಅಬ್ಬಕ್ಕ, ಬಳ್ಳಾರಿಯ ರುದ್ರಮ್ಮ, ನಾಗಮ್ಮ ಪಾಟೀಲ,ಶಕುಂತಲಾ, ಸೇರಿದಂತೆ ಕೊಡಗಿನ ಗೌರಮ್ಮ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಸುದೀರ್ಘವಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸ್ನೇಹ ಸಿರಿ ಬಳಗದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಇತಿಹಾಸದಲ್ಲಿ ದಾಖಲಾಗಿರುವ ಮಹಿಳೆಯರ ಸಾಧನೆಗಳ ಬಗ್ಗೆ ಯುವ ಪೀಳಿಗೆಗೆ ತಲಪಿಸುವಲ್ಲಿ ವಿಫಲವಾಗಿರುವದರಿಂದ ಹಲವಷ್ಟು ಮಹಿಳೆಯರ ಹೋರಾಟ ಹಾಗೂ ತ್ಯಾಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಅಂತಹವರನ್ನು ಗುರುತಿಸುವ ಹಾಗೂ ಸ್ಮರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿನಿಯರಿಗಾಗಿ ಸರ್ಕಾರ ಪ್ರತ್ಯೇಕ ಮಹಿಳಾ ಕಾಲೇಜ್ ಸ್ಥಾಪಿಸಿ ಉತ್ತೇಜನ ನೀಡುತ್ತಿದೆ, ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಯಾವದೇ ಅಡೆ, ತಡೆ ಇಲ್ಲದೆ ಸ್ವತಂತ್ರವಾಗಿ ವಿದ್ಯಾರ್ಜನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನೀರ ಮೈನಾ ಮಾತನಾಡಿ, ವಿದ್ಯಾರ್ಥಿನಿಯರು ಸಿನಿಮಾ ನಟರ ಅಭಿಮಾನಿಗಳಾಗಿ ಸಿನಿಮಾದಲ್ಲಿನ ಪಾತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಾಡಿಗಾಗಿ ಹೋರಾಡಿದ ಮೇಧಾವಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಪ್ರಕಾಶ್ ಮಾತನಾಡಿ, ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಭಾಷಾವಾರು ಪ್ರಾಂತ್ಯಗಳ ವರ್ಗೀಕರಣದಿಂದ ಕರ್ನಾಟಕವಾಯಿತು. ಸುವರ್ಣ ಸಂಭ್ರಮದ ಈ ಹೊತ್ತಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಎಂದರು.
ಕಾಲೇಜಿನ ಸಹ ಪ್ರಾಧ್ಯಾಪಕ ಎನ್.ಪಿ.ಸತೀಶ್ ಹಿಂದೆ ಭಾರತೀಯ ಸೇನೆಯಲ್ಲಿ ಮಹಿಳೆಯರದ್ದೇ ರೆಜಿಮೆಂಟ್ ಇದ್ದ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿನಿಯರಾದ ಗಾಯನ ಮತ್ತು ತಂಡದವರು ಬಾರಿಸು ಕನ್ನಡ ಡಿಂಡಿಮವ ಗೀತೆ ಹಾಡಿದರು. ಪ್ರಿಯಾ ಸ್ವಾಗತಿಸಿದರು. ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ನಿರ್ಮಲ ಪೂವಯ್ಯ ನಿರೂಪಿಸಿದರು. ವಿದ್ಯಾಶ್ರೀ ವಂದಿಸಿದರು.