ಬ್ಯಾಡಗಿ: ಮಹಿಳೆಯರ ಮೇಲಿನ ಶೋಷಣೆ ಹಾಗೂ ದೌರ್ಜನ್ಯಕ್ಕೆ ಕೊನೆ ಇಲ್ಲದಂತಾಗಿದೆ. ಸತಿ ಸಹಗಮನ ಪದ್ಧತಿಯಿಂದ ಹಿಡಿದು ಇಂದಿನ ಡಿಜಿಟಲ್ ವಂಚನೆಯಲ್ಲಿಯೂ ಮಹಿಳೆಯೇ ಟಾರ್ಗೆಟ್ ಆಗುತ್ತಿರುವುದು ನೋವಿನ ಸಂಗತಿ ಎಂದು ಆಲ್ ಇಂಡಿಯಾ ವಿಶ್ವಕರ್ಮ ಫೆಡರೇಶನ್ ಸಂಸ್ಥೆಯ ಉಪಾಧ್ಯಕ್ಷೆ ಸುನಿತಾ ಬಡಿಗೇರ ಕಳವಳ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಆಲ್ ಇಂಡಿಯಾ ವಿಶ್ವಕರ್ಮ ಫೆಡರೇಶನ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾವ ಕಾಲಘಟ್ಟದಲ್ಲಿಯೂ ಮಹಿಳೆ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಸಾವಿರ ವರ್ಷಗಳಿಂದಲೂ ಸಾಕಷ್ಟು ಉದಾಹರಣೆ ಸಿಗುತ್ತಿವೆ. ಮಹಿಳಾ ಸುರಕ್ಷತೆ ಎಂಬುದು ಕೇವಲ ಯೋಜನೆ ರೂಪಿಸುವುದರಿಂದ ಸಾಧ್ಯವಿಲ್ಲ. ಬದಲಾಗಿ ಪುರುಷನ ಮನಸ್ಥಿತಿ ಬದಲಾದಲ್ಲಿ ಮಾತ್ರ ಅದು ಸಾಕಾರಗೊಳ್ಳಲಿದೆ ಎಂದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ತೋರಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಪಲ್ಲವಿ ಹಳ್ಳಳ್ಳಿ, ಜಯಶ್ರೀ ತವರದ, ಸರೋಜಾ ಉಳ್ಳಾಗಡ್ಡಿ, ಸವಿತಾ ಗಡಾದ, ರೇಖಾ ಗಡಾದ, ಕವಿತಾ ಮೂಡ್ವಿ, ಜ್ಯೋತಿ ಮೂಡ್ವಿ, ವಿಜಯ ಕಲ್ಲಾಪುರ, ಉಮಾ ನೆಲೋಗಲ್ ಪುಷ್ಪ ನೇಗಿಗೌಡರ, ನಿರ್ಮಲ ಗುತ್ತಲ, ಶೋಭಾ ನೂಲ್ವಿ, ಭಾರತಿ ನೂಲ್ವಿ ಸೇರಿದಂತೆ ಹಲವು ಮಹಿಳೆಯರು ಭಾಗವಹಿಸಿದ್ದರು.ರೇಣುಕಾಚಾರ್ಯರ ಜಯಂತಿ ಇಂದು
ರೇಣುಕಾಚಾರ್ಯರ ಮಂಗಲ ಮೂರ್ತಿಗೆ ಪ್ರಾಥಃಕಾಲ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋಪಚಾರ ಪೂಜಾ ಕಾರ್ಯಕ್ರಮಗಳು ಜರುಗುವವು. ನಂತರ 8 ಗಂಟೆಗೆ ರೇಣುಕಾಚಾರ್ಯ ಭಗವತ್ಪಾದಂಗಳವರ ಮೂರ್ತಿ ಉತ್ಸವವು ಸಕಲ ಬಿರುದಾವಳಿ ಹಾಗೂ ಪೂರ್ಣಕುಂಭ ಮಂಗಳ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೇಣುಕ ಮಂದಿರ ತಲುಪುವುದು.ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬೆಳಗ್ಗೆ 11.55ಕ್ಕೆ ಸಾಮೂಹಿಕ ವಿವಾಹಗಳು ಹಾಗೂ ಮಹಾ ಪ್ರಸಾದ ನಡೆಯಲಿದೆ.ಮಧ್ಯಾಹ್ನ 1 ಗಂಟೆಗೆ ನಡೆಯುವ ಧರ್ಮಸಭೆಯಲ್ಲಿ ಬಂಕಾಪುರದ ಅರಳಲೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಿರೇಮಣಕಟ್ಟಿಯ ವಿಶ್ವರಾಧ್ಯ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಹಾವೇರಿಯ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರಾಣಿಬೆನ್ನೂರಿನ ಶಿವಯೋಗಿ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ರೇಣುಕ ಮಂದಿರದ ಅಧ್ಯಕ್ಷ ರವತಪ್ಪ ಎಂ. ಬಿಕ್ಕಣ್ಣವರ, ಗೌರವಾಧ್ಯಕ್ಷ ಮಹೇಶ ಸಾಲಿಮಠ ವಹಿಸುವರು.ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕಲ್ಮಠ ಪಾಲ್ಗೊಳ್ಳುವರು.