ಭಟ್ಕಳ: ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ನಿರ್ದೇಶಕಿ ಡಾ. ಪುಷ್ಪಲತಾ ಎಂ. ವೈದ್ಯ ಅವರು, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ನಿತ್ಯ ನಿರಂತರವಾಗಿರಬೇಕು. ಸಮಾಜದಲ್ಲಿ ಸ್ತ್ರೀಯರನ್ನು ಗೌರವಿಸುವ ಮೂಲಕ ಮಹಿಳಾ ದಿನಾಚರಣೆ ನಿರಂತರವಾಗಿ ನಡೆಯಲಿ ಎಂದು ಹೇಳಿದರು.ಶಿಕ್ಷಕಿ ಹಾಗೂ ಲೇಖಕಿ ರೇಣುಕಾ ರಮಾನಂದ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ್, ಡಾ. ಪುಷ್ಪಲತಾ ಎಂ. ವೈದ್ಯ ಸೇರಿ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 17 ಮಹಿಳೆಯರನ್ನು ಸನ್ಮಾನಿಸಲಾಯಿತು. ಆನಂತರ ''''''''ನನ್ನೊಳಗಿನ ನಾನು'''''''' ಸಂವಾದ ಕಾರ್ಯಕ್ರಮದಲ್ಲಿ ಮಹಿಳೆಯರು ಅನುಭವಿಸುವ ಸಾಮಾಜಿಕ, ಮಾನಸಿಕ, ಸಂಸಾರಿಕ ಮತ್ತು ಆಥಿಕ ಸಮಸ್ಯೆಗಳಿಗೆ ಪರಿಹಾರ ತಿಳಿಸಲಾಯಿತು. ಸಂವಾದ ಕಾರ್ಯಕ್ರಮದಲ್ಲಿ ಕುಮಟಾದ ರಾಜು ಕಲ್ಲಪ್ಪ, ಕುಮಟಾ ಡಯಟ್ ಉಪನ್ಯಾಸಕಿ ಶುಭಾ ನಾಯಕ, ಮಾನಸಿಕ ತಜ್ಞೆ ರೀನೆ ಪರ್ಟಾಡೋ, ಸ್ತ್ರೀ ರೋಗ ತಜ್ಞೆ ಡಾ. ಶಮ್ಸನೂರ್ ಖಾನ್ ಭಾಗವಹಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು. "ಸ್ತ್ರೀ-ಸಂಭ್ರಮ ೨೦೨೫ " ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ನಡೆದಿದ್ದು, ಪಾಲಕರು, ಪೋಷಕರು ಮತ್ತು ಶಿಕ್ಷಕಿಯರ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಯಿತು.
ಮುಖ್ಯೋಪಾಧ್ಯಾಯ ಗಣೇಶ ನಾಯ್ಕ ಅವರು ಸ್ವಾಗತಿಸಿದರು. ಪ್ರಾಧ್ಯಾಪಕ ಸಂತೋಷ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಗಣಪತಿ ನಾಯ್ಕ ಸಾಧಕರ ಸಾಧನೆಯನ್ನು ತಿಳಿಸಿದರು, ಸಹ ಶಿಕ್ಷಕ ಮಹೇಶ ನಾಯ್ಕ ವಂದಿಸಿದರು.