ಕೇಂದ್ರದಿಂದ ಸೌದೆ ಒಲೆ ಯೋಜನೆ: ಡಿಕೆಶಿ

KannadaprabhaNewsNetwork |  
Published : Apr 01, 2026, 01:45 AM IST
ಡಿಕೆಶಿ ಪ್ರಚಾರ | Kannada Prabha

ಸಾರಾಂಶ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಿಗೆ ಸೌದೆ ಒಲೆ ಯೋಜನೆ ನೀಡಿದೆ. ಈ ಹಿಂದೆ ಹೇಳಿದ್ದ ಅಚ್ಛೇ ದಿನ್ ಏನಾಯ್ತು? ಈಗ ಇರುವುದು ಕಚ್ಚಾ ದಿನವೇ ಎಂಬುದನ್ನು ಬಿಜೆಪಿ ನಾಯಕರು ಹೇಳಬೇಕು ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಿಗೆ ಸೌದೆ ಒಲೆ ಯೋಜನೆ ನೀಡಿದೆ. ಈ ಹಿಂದೆ ಹೇಳಿದ್ದ ಅಚ್ಛೇ ದಿನ್ ಏನಾಯ್ತು? ಈಗ ಇರುವುದು ಕಚ್ಚಾ ದಿನವೇ ಎಂಬುದನ್ನು ಬಿಜೆಪಿ ನಾಯಕರು ಹೇಳಬೇಕು ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಶಿವಕುಮಾರ್‌ ಮಾತನಾಡಿದರು.

ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಈ ವೇಳೆಯಲ್ಲೇ ಜನ ಪರದಾಡುತ್ತಿದ್ದಾರೆ. ಅಡುಗೆ ಅನಿಲ ಪೂರೈಕೆಯಿಲ್ಲದೆ ಹೋಟೆಲ್‌ಗಳು ಬಂದ್‌ ಆಗುತ್ತಿವೆ. ಜನ ಎಲೆಕ್ಟ್ರಿಕ್‌ ಒಲೆಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ. ಕಳೆದ 15 ದಿನಗಳಿಂದ ರಾಜ್ಯದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಶೇ. 10ರಷ್ಟು ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಒಲೆ ಭಾಗ್ಯ ನೀಡಿದೆ. ಆದರೆ, ಸೌದೆ ಎಲ್ಲಿಂದ ಒದಗಿಸಬೇಕು ಎಂದು ವ್ಯಂಗ್ಯವಾಡಿದರು.ಯುದ್ಧದ ನೆಪ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ ಮತ್ತು ನೀತಿಗಳಿಂದಾಗಿ ಜನ ಬೆಲೆ ಏರಿಕೆಯಿಂದ ನರಳುವಂತಾಗಿದೆ. ಅಡುಗೆ ಅನಿಲದ ಸಿಲಿಂಡರ್‌ ಬೆಲೆ ಏರಿಕೆ ಮಾಡಲಾಗಿದೆ. ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆಯ ಯುದ್ಧ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಮೆಂಟ್‌ ಬೆಲೆ ಪ್ರತಿ ಚೀಲಕ್ಕೆ 50ರಿಂದ 100 ರು., ಕಬ್ಬಿಣ ಬೆಲೆ ಟನ್‌ಗೆ 47 ಸಾವಿರ ರು.ನಿಂದ 59 ಸಾವಿರ ರು.ವರೆಗೆ ಹೆಚ್ಚಳವಾಗಿದೆ. ಇದರಿಂದಾಗಿ ಜನಸಾಮಾನ್ಯರು ಮನೆ ಕಟ್ಟಲು ಹಿಂದೇಟು ಹಾಕುವಂತಾಗುತ್ತಿದೆ. ಅಲ್ಲದೆ, ಸರ್ಕಾರದ ಕಾಮಗಾರಿಗಳಿಗೂ ಹಿನ್ನಡೆಯಾಗುತ್ತಿದೆ. ಇದೆಲ್ಲದರ ನಡುವೆ ವಿಮಾನ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಳ ಮಾಡಲಾಗಿದೆ. ಅಡುಗೆ ಅನಿಲ ಸಮರ್ಪಕ ಪೂರೈಕೆಯಾಗದ ಕಾರಣ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಅದರ ಪರಿಣಾಮ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ ಬೆಲೆ 2000 ರು., ವಾಣಿಜ್ಯ ಸಿಲಿಂಡರ್‌ 4000 ರು.ವರೆಗೆ ತಲುಪಿದೆ. ಅಂಚೆ ಸೇವೆಗಳ ಬೆಲೆಯಲ್ಲೂ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.

ಸುರ್ಜೇವಾಲಾ ಮಾತನಾಡಿ, ಏ.1 ಕೇಂದ್ರ ಸರ್ಕಾರಕ್ಕೆ ಜನರನ್ನು ದೋಚಿ, ದರೋಡೆ ಮಾಡುವ ದಿನವನ್ನಾಗಿಸಿದೆ. ಬೆಲೆ ಏರಿಕೆಯಿಂದ ಪ್ರತಿನಿತ್ಯ ಜನರ ಜೀವನದ ಮೇಲೆ ದಾಳಿ ಮಾಡಲಾಗುತ್ತಿದೆ. 2019-20ರಿಂದ 2025-26ರವರೆಗೆ ರಾಜ್ಯದಿಂದ 23 ಸಾವಿರ ಕೋಟಿ ರು. ಟೋಲ್‌ ಶುಲ್ಕ ವಸೂಲಿ ಮಾಡಲಾಗಿದೆ. ಈ ಮತ್ತೆ ಶೇ.5ರಷ್ಟು ಟೋಲ್‌ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಜನರ ಮೇಲೆ 250 ಕೋಟಿ ರು. ಹೊರೆ ಬೀಳಲಿದೆ. ಅಗತ್ಯ ಔಷಧಗಳು, ಪ್ಲಾಸ್ಟಿಕ್‌ ಸಾಮಗ್ರಿ, ಬಿಟುಮಿನ್‌, ಸಿಮೆಂಟ್‌, ಕಬ್ಬಿಣ, ಪೆಟ್ರೋಕೆಮಿಕಲ್‌ ಉಪಉತ್ಪನ್ನಗಳು ಹೀಗೆ ಎಲ್ಲದರ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಚುನಾವಣೆಗಳಲ್ಲಿ ಮತ ಕೇಳುವುದಕ್ಕೂ ಮುನ್ನ ಪ್ರಧಾನಿ ಮತ್ತು ಬಿಜೆಪಿ ನಾಯಕರು ಬೆಲೆ ಏರಿಕೆ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್‌ ಸೌಲಭ್ಯಗಳ ಪ್ರಯೋಜನ ಪಡೆಯಿರಿ
ನೆಲಮಂಗಲ ರೋಟರಿ ಸಂಸ್ಥೆಗೆ ಸಮುದಾಯ ಸೇವಾ ಪ್ರಶಸ್ತಿ