ಹಿಂದುಳಿದ ವಾಲ್ಮೀಕಿ ಸಮಾಜ ಮೇಲೆತ್ತುವ ಕೆಲಸವಾಗಬೇಕಿದೆ: ಸತೀಶ ಜಾರಕಿಹೊಳಿ

KannadaprabhaNewsNetwork |  
Published : Oct 18, 2025, 02:02 AM IST
ಜಮಖಂಡಿ ನಗರದ ಬಸವಭವನ ದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಲೊಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜವನ್ನು ಮೇಲೆತ್ತುವ ಕೆಲಸವಾಗಬೇಕಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜವನ್ನು ಮೇಲೆತ್ತುವ ಕೆಲಸವಾಗಬೇಕಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಬಸವಭವನದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿಗಾಗಿ ಇಂಥ ಕಾರ್ಯಕ್ರಮ ನಡೆಯಬೇಕು. ಸಮಾಜದ ಸ್ಥಿತಿ ಸುಧಾರಿಸುವ ಅದರ ಬಗ್ಗೆ ಚರ್ಚಿಸುವ ಕೆಲಸವಾಗ ಬೇಕಿದೆ ಎಂದು ಹೇಳಿದರು.

ಡಾ.ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನದ ಫಲವಾಗಿ ಇಂದು ಸಮಾಜ ಬೆಳಕಿಗೆ ಬಂದಿದೆ. ನಮ್ಮ ಸರ್ಕಾರ ಅನೇಕ ಯೋಜನೆಗಳು, ಸಾಲಸೌಲಭ್ಯಗಳನ್ನು ಸಮಾಜಕ್ಕೆ ನೀಡಿದೆ. ಅವುಗಳ ಸದುಪಯೋಗಪಡಿಸಿಕೊಂಡು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಮಾಜ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಕೆಲಸಗಳು ನಡೆಯಬೇಕು. ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ದೇಶದಾದ್ಯಂತ ಜಾತೀಯತೆ ಹೆಚ್ಚುತ್ತಿದೆ. ರಾಜಕೀಯ ಲಾಭಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಮನೆಗಳಲ್ಲಿ ಯಾವುದೇ ಸಂಪ್ರದಾಯ, ದೇವರ ಪೂಜಾ ಪದ್ಧತಿಗಳಿದ್ದರೂ ನಾವೆಲ್ಲ ಹಿಂದೂಗಳು, ಸನಾತನ ಧರ್ಮದವರು ಎಂಬ ಭಾವನೆ ಬರಬೇಕಿದೆ. ರಾಮಾಯಣ ಮಹಾಕಾವ್ಯ ರಚಿಸಿದ್ದು ವಾಲ್ಮೀಕಿ ಮಹರ್ಷಿಗಳು, ಶ್ರೀರಾಮ ಕ್ಷತ್ರಿಯ, ಶ್ರೀಕೃಷ್ಣ ಗೊಲ್ಲರ ಕುಲದವ, ಅವರನ್ನು ಪೂಜಿಸುವರು ಬ್ರಾಹ್ಮಣರು. ಆದರೆ ಈಗ ಜನಿವಾರ ಧರಿಸುವವರು ಮಾತ್ರ ಹಿಂದುಗಳು ಎಂಬ ಭಾವನೆ ಬಿತ್ತುವ ಕೆಲಸ ನಡೆದಿದೆ. ಹಿಂದು ಎಂದರೆ ಅದು ಜಾತಿಯ ಪ್ರತೀಕ ಅಲ್ಲ, ಅದೊಂದು ಜೀವನ ಪದ್ಧತಿ. ಉಳಿದೆಲ್ಲ ಸಂಸ್ಕೃತಿಗಳಿಗೆ ಆಧಾರಗಳಿವೆ, ಆದರೆ ಹಿಂದು ಮಾತ್ರ ಸನಾತನ, ಆದಿ ಅಂತ್ಯ ರಹಿತವಾದ ಪದ್ಧತಿಯಾಗಿದೆ. ದೇವನಿರ್ಮಿತ ದೇಶ ಭಾರತ. 15 ಲಕ್ಷವರ್ಷಗಳ ಹಿಂದೆ ಶ್ರೀರಾಮ ಸೇತು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳೇ ಖಚಿತಪಡಿಸಿದ್ದಾರೆ. ಮಹಾತ್ಮ ಗಾಂಧಿ ಅವರು ಭಾರತವನ್ನು ದೇವರನಾಡು ಎಂದು ಕರೆದಿದ್ದಾರೆ. ವಿಶ್ವದಲ್ಲಿ ಭಾರತ ಅತ್ಯಂತ ಬಲಿಷ್ಠ ಮತ್ತು ಶ್ರೀಮಂತ ರಾಷ್ಟ್ರವಾಗಲಿದೆ. ಸಾಧು ಸಂತರ ಮಾರ್ಗದರ್ಶನದಲ್ಲಿ ಒಗ್ಗಟ್ಟಿನಿಂದ ರಾಷ್ಟ್ರಕಟ್ಟುಲು ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು. ಬಬಲೇಶ್ವರದ ಶಿಕ್ಷಕ ಡಿ.ಜಿ. ನಾಯಕ ವಿಶೇಷ ಉಪನ್ಯಾಸ ನೀಡಿದರು. ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ, ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಗಂಗಾಧರ ಮಾರದಾನಿ, ಸಮಾಜ ಕಲ್ಯಾಣ ಅಧಿಕಾರಿ ಜಗದೇವ ಪಾಸೋಡಿ, ಮುಖಂಡರಾದ ಕಾಡು ಮಾಳಿ, ಶ್ರೀಶೈಲ ದಳವಾಯಿ, ವರ್ಧಮಾನ ನ್ಯಾಮಗೌಡ, ಡಿಎಸ್‌ಎಸ್‌ನ ನಾಗವಾರ ಬಣದ ರಾಜ್ಯಾಧ್ಯಕ್ಷ ಶಾಮರಾವ ಘಾಟಗೆ, ಪುಟ್ಟುಪಾನಿ, ಐಎನ್‌ಟಿಯುಸಿ ಜಿಲ್ಲಾಅಧ್ಯಕ್ಷ ತೌಫಿಕ್‌ ಪಾರ್ಥನಳ್ಳಿ, ರಾಜು ಮೇಲಿನಕೇರಿ ಹಾಗೂ ಸಮಾಜದ ಮುಖಂಡರು ವೇದಿಕೆಯಲ್ಲಿದ್ದರು. ಶಂಕರ ಲಮಾಣಿ, ಸವಿತಾಬಾಯಿ ನಿರೂಪಿಸಿದರು. ಪರಶುರಾಮ ಬಿಸನಾಳ ಸ್ವಾಗತಿಸಿದರು. ನಗರದ ಹಳೆಯ ತಹಸೀಲ್ದಾರ ಕಚೇರಿಯಿಂದ ಬಸವಭವನದ ವರೆಗೆ ಭವ್ಯ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌