ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ
ಮಾನವ ಕಳ್ಳ ಸಾಗಾಣಿಕೆ ತಡೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಅದನ್ನು ತಡೆಯಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ನಗರದ ಜಿಲ್ಲಾ ಪಂಚಾಯಿತಿಯ ನಜೀರ್ ಸಾಬ್ ಸಭಾಗಂಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಸಹಭಾಗೀದಾರರ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕಾವಲು ಸಮಿತಿಯ ಸದಸ್ಯರಿಗೆ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮಾನವನನ್ನು ಕೊಂಡುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಕಡಿಮೆ ವರ್ಷದ ಮಕ್ಕಳನ್ನು ದುಡ್ಡಿನ ಆಮಿಷ ಒಡ್ಡಿ ಮಾರಾಟ ಮಾಡಲಾಗುತ್ತಿದ್ದು, ಇದು ಕಾನೂನು ಪ್ರಕಾರ ತಪ್ಪು. ಸಮಾಜದಲ್ಲಿ ಇದೀಗ ಮಾನವ ಕಳ್ಳ ಸಾಗಾಣಿಕೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದ್ದು, ಅದರಲ್ಲೂ ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಮಹಿಳೆಯರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಲ್ಲಿ ಮಕ್ಕಳು ಗೈರಾಗಿದ್ದಲ್ಲಿ ಹಾಜರಾತಿ ನೀಡಬಾರದು. ಮನೆ ಭೇಟಿ ನೀಡಬೇಕು. ವಾಸ್ತವ ಪರಿಶೀಲಿಸಬೇಕು. ಇದರಿಂದ ಆ ಮಗು ನಾಪತ್ತೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿದೆ ಎಂಬುದು ಪತ್ತೆಯಾಗುತ್ತದೆ. ಮಗು ಗೈರಾಗಿದ್ದು, ಹಾಜರಾತಿ ನೀಡಿದಲ್ಲಿ ಆ ದಿನ ಆ ಮಗು ಕಾಣೆಯಾಗಿದ್ದಲ್ಲಿ ಅಥವಾ ಬಾಲ್ಯವಿವಾಹದಂತಹ ಘಟನೆ ಸಂಭವಿಸಿದಲ್ಲಿ ನೀವೇ ಜವಾಬ್ದಾರರಾಗುತ್ತೀರಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಎಚ್ಚರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ, ಮಾನವ ಕಳ್ಳ ಸಾಗಾಣಿಕೆ ದಂಧೆಯು ಸಮಾಜದ ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದು, ಮಾನವ ಕಳ್ಳ ಸಾಗಾಣಿಕೆಯು ವಿದ್ಯಾವಂತರಿಂದಲೇ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಕಾರ್ಯಾಗಾರ ಆರಂಭಕ್ಕೂ ಮುನ್ನ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸವಿತಾ ಸಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.