ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಪುರಸಭೆಯ ಕಾರ್ಮಿಕರು ಹಾಗೂ ನೌಕರರು ಬುಧವಾರ ಡಾ.ಅಂಬೇಡ್ಕರ್ ವೃತ್ತದಲ್ಲಿ ಕೇಕ್ ಕತ್ತರಿಸುವುದರ ಮೂಲಕ ಕಾರ್ಮಿಕ ದಿನ ಆಚರಿಸಿದರು. ನಂತರ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಪಟ್ಟು ದುಡಿಯುವ ಕೆಲಸಗಾರರು ದೇಶ, ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಡುತ್ತಾರೆ. ಇಂತಹ ಶ್ರಮಜೀವಿಗಳ ಪ್ರಯತ್ನ ಕೆಲಸದಲ್ಲಿಯೇ ದೇಶದ ಅಭಿವೃದ್ಧಿ ಅಡಗಿದೆ ಎಂದು ಹೇಳಿದರು.
ಕಾರ್ಮಿಕರು ರಾಷ್ಟ್ರದ ಬೆನ್ನೆಲುಬು. ಏಕೆಂದರೆ ಅವರಿಂದಲೇ ಒಂದು ರಾಷ್ಟ್ರವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. ದೈಹಿಕ ಶ್ರಮವು ಮಾನಸಿಕ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ. ಜೊತೆಗೆ ಮಾನಸಿಕ ಚಟುವಟಿಕೆ ಸುಧಾರಿಸುತ್ತದೆ. ಕಠಿಣ ಪರಿಶ್ರಮವು ನಿಮ್ಮನ್ನು ಎಂದಿಗೂ ವಿಫಲಗೊಳಿಸುವುದಿಲ್ಲ. 50 ಜನ ಸಾಮಾನ್ಯರ ಕೆಲಸವನ್ನು ಒಂದು ಯಂತ್ರ ಮಾಡಬಲ್ಲದು. ಆದರೆ ಒಬ್ಬ ಅಸಾಧಾರಣ ಮನುಷ್ಯನ ಕೆಲಸವನ್ನು ಯಾವ ಯಂತ್ರವೂ ಮಾಡಲಾಗದು. ಶ್ರಮವು ಮಾನವ ಘನತೆ ಮತ್ತು ಸೃಜನಶೀಲ ಶ್ರೇಷ್ಠತೆಯನ್ನು ವ್ಯಕ್ತಪಡಿಸುತ್ತದೆ. ಕಾರ್ಮಿಕ ದಿನವನ್ನು ಆಚರಿಸಿ, ಪ್ರತಿ ರಾಷ್ಟ್ರದ ಅಸ್ತಿತ್ವ ಮತ್ತು ಬೆಳವಣಿಗೆ ಗೌರವಿಸಬೇಕು ಎಂದು ಹೇಳಿದರು.ಆರೋಗ್ಯ ನಿರೀಕ್ಷಕ ಸೋಮನಾಯಕ, ರಾಜ್ಯ ಪೌರ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ, ಚಂದ್ರಶೇಕರ ಕಾಲೇಬಾಗ ಮಾತನಾಡಿ, ನಗರ,ಪಟ್ಟಣಗಳ ಜೀವನಾಡಿಯಾಗಿರುವ ಪೌರ ಕಾರ್ಮಿಕರು ಸಮಾಜದ ಸ್ವಾಸ್ಥ್ಯ ಕಾಪಾಡುವ, ಸಮರ್ಪಕವಾಗಿ ಪರಿಸರವನ್ನು ಸ್ವಚ್ಛವಾಗಿಡುವ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ಅವರನ್ನು ಅವರ ಕಸಬಿನ ಮೂಲಕ ಅಳೆಯದೇ ಅವರಿಗೂ ಘನತೆ, ಗೌರವ ನೀಡಬೇಕು ಎಂದು ಹೇಳಿದರು.
ಪೌರ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಲಕ್ಷ್ಮಿ ಕಾಲೇಬಾಗ, ಮರೆಪ್ಪ ಗುಡಮಿ, ಮುತ್ತು ಮುರಾಳ, ಮಲ್ಲಪ್ಪ ನಡಗಡ್ಡಿ ಹಾಗೂ ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಇದ್ದರು.