ಅಂಕೋಲಾ:
ಅಡ್ಡಿ-ಆತಂಕಗಳ ನಡುವೆಯೂ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೆಳಗಾವಿಯ ವಿಶ್ರಾಂತ ಸಹನಿರ್ದೇಶಕ ರಾಜೀವ ನಾಯಕ ಹೇಳಿದರು.ಅವರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕೋಲಾ ನಂ. 1ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಅಂಕೋಲಾ ಹಮ್ಮಿಕೊಂಡಿದ್ದ ವಯೋನಿವೃತ್ತ ಶಿಕ್ಷಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ವಯೋನಿವೃತ್ತಿ ಹೊಂದಿದ ಇಂತಹ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯ ಮಾದರಿಯಾದುದು ಎಂದರು.
ಶೈಕ್ಷಣಿಕ ರಂಗದಲ್ಲಿ ನಿರಂತರವಾಗಿ ಹಲವು ಬದಲಾವಣೆಗಳು ಆಗುತ್ತಿವೆ. ಈ ಎಲ್ಲ ಬದಲಾವಣೆಗಳಿಗೆ ಹೊಂದಿಕೊಂಡು ಹೊಸ ಹೊಸ ಬೋಧನಾ ಕೌಶಲ್ಯಗಳನ್ನು ರೂಢಿಸಿಕೊಂಡು ವಿದ್ಯಾರ್ಥಿಗಳ ಒಲುಮೆಗೆ, ಅಭಿಮಾನಕ್ಕೆ ಪಾತ್ರರಾಗಿ ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ಸುಧೀರ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ವಿಜಯ ಆರ್. ನಾಯಕ ಅಭಿನಂದಿಸಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಯೋನಿವೃತ್ತಿ ಹೊಂದಿದ ಸುನಂದಾ ನಾರಾಯಣ ನಾಯಕ, ಹೊನ್ನಮ್ಮ ನಾರಾಯಣ ನಾಯಕ, ಶೋಭಾ ಮಾಣಿ ನಾಯಕ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿದರು. ಸದಸ್ಯೆ ಶೋಭಾ ನಾಯಕ ವಂದಿಸಿದರು.
ಉಪಾಧ್ಯಕ್ಷೆ ಭಾರತಿ ಬಿ. ನಾಯಕ, ಸದಸ್ಯರಾದ ತುಕಾರಾಮ ಬಂಟ, ವೆಂಕಮ್ಮ ನಾಯಕ, ದಿವಾಕರ ದೇವನಮನೆ, ಸಂಜೀವ ಆರ್. ನಾಯಕ, ವಿನಾಯಕ ಪಿ. ನಾಯ್ಕ, ಆನಂದು ವಿ. ನಾಯ್ಕ, ಬಿಆರ್‌ಪಿ ಮಂಜುನಾಥ ನಾಯ್ಕ, ವೇಲಾಯುಧ ನಾಯರ, ನಾರಾಯಣ ಆರ್. ನಾಯಕ, ಮಹಮ್ಮದ್ ಮುಸ್ತಾಖ್ ಅಬ್ದುಲ್ ಹಮೀದ್ ಶೇಖ್, ಸೃಜನ ನಾಯಕ, ಭಾಗ್ಯಲಕ್ಷ್ಮೀ ನಾಯಕ ಉಪಸ್ಥಿತರಿದ್ದರು.