ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ಕಟೀಲು ಯಕ್ಷಗಾನ ಮೇಳಗಳ ಇತಿಹಾಸ ದಾಖಲೀಕರಣಕ್ಕೆ ದೇವಳ ಮುಂದಾಗಿದೆ.
10ರಂದು ಕಟೀಲಿನ ಕುದ್ರು ಭ್ರಾಮರೀವನದಲ್ಲಿ ‘ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ’ ವಿಚಾರಗೋಷ್ಠಿಯ ಮೂಲಕ ಇತಿಹಾಸ ದಾಖಲೀಕರಣಕ್ಕೆ ಚಾಲನೆ ಸಿಗಲಿದೆ. ಅಂದು ದಿನವಿಡೀ ವಿವಿಧ ಪ್ರಬಂಧ ಮಂಡನೆ, ಕಲಾವಿದರ, ಅರ್ಚಕರ, ಮೇಳದ ಸಂಚಾಲಕರ ಸಂವಾದ ನಡೆಯಲಿದೆ.ಬೆಳಗ್ಗೆ 9.45ಕ್ಕೆ ಬೆಂಗಳೂರು ಉತ್ತರ ವಿವಿಯ ಉಪಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸಲಿದ್ದು, ಕಲಾರಂಗದ ಎಂ. ಗಂಗಾಧರ ರಾವ್, ಅರ್ಚಕರಾದ ವಾಸುದೇವ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ ಉಪಸ್ಥಿತರಿರುತ್ತಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿ.ವಿ.ಯ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಹಾದಿಗಲ್ಲು ಲಕ್ಷ್ಮೀನಾರಾಯಣ ಭಟ್, ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಉಪಸ್ಥಿತಿಯಲ್ಲಿ ಸಮಾರೋಪದ ನುಡಿಗಳನ್ನಾಡಲಿದ್ದಾರೆ.
ಪ್ರದರ್ಶನ ಕಲೆಗೆ ಸಂಬಂಧಿಸಿ ಇತಿಹಾಸ ಪ್ರಜ್ಞೆಯ ಅಗತ್ಯ, ದಾಖಲೀಕರಣದ ಔಚಿತ್ಯದ ಬಗ್ಗೆ ಡಾ. ಪುಂಡಿಕಾಯಿ ಗಣಪಯ್ಯ ಭಟ್, ಕಟೀಲು ಮೇಳದಲ್ಲಿ ಇತಿಹಾಸವನ್ನು ಬೆಳಗಿಸಿದ ಕಲಾವಿದರು ಬಗ್ಗೆ ಪು. ಗುರುಪ್ರಸಾದ್ ಭಟ್ ಉಪನ್ಯಾಸ ನೀಡಲಿದ್ದು, ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ಪಡ್ರೆ ಕುಮಾರ ಅವರೊಂದಿಗೆ, ದೇವೀ ಮಾಹಾತ್ಮ್ಯೆ ಪ್ರಸಂಗದ ಪರಂಪರೆಯ ಕುರಿತ ಸಂಶೋಧಕಿ ಡಾ. ಶ್ರೀದೇವೀ ಕಲ್ಲಡ್ಕ, ಕಟೀಲು ಮೇಳದ ಕುರಿತು ಪಾಂಡುರಂಗ ಭಟ್, ಲಕ್ಷ್ಮೀನಾರಾಯಣ ಭಟ್ ಅವರೊಂದಿಗೆ ಹಾಗೂ ಕಟೀಲು ಮೇಳದ ಕುರಿತು ಕಲಾತ್ಮಕ, ಆಡಳಿತಾತ್ಮಕ ವಿಚಾರಗಳ ಕುರಿತು ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟರೊಂದಿಗೆ ಸಂವಾದ ನಡೆಯಲಿದೆ.ಯಕ್ಷಗಾನದಲ್ಲಿ ಅನೇಕ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂಬ ಪರಿಕಲ್ಪನೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ವಿಚಾರಪ್ರಸ್ತುತಿಗೆ ಅವಕಾಶ ನೀಡಲಾಗಿದೆ.ಮಾತುಗೀತ ರೂಪಕ ಆಯೋಜಿಸಲಾಗಿದ್ದು, ಗೀತದಲ್ಲಿ ಕರ್ಬೆಟ್ಟು ವಿಶ್ವಾಸ್ ಭಾಗವತ, ಸ್ಕಂದ ಕೊನ್ನಾರ್, ಸಮರ್ಥ ಉಡುಪ, ಮಾತಿನಲ್ಲಿ ಸುನಿಲ್ ಭಾಸ್ಕರ್, ನಾಗೇಶ ಬೈಲೂರು ವಯಲಿನ್‌ನಲ್ಲಿ ವಿ. ಪ್ರಣಿತ್ ಬಳ್ಳಕ್ಕುರಾಯ ಭಾಗವಹಿಸಲಿದ್ದಾರೆ