ಮುಂಡಗೋಡ: ಇಡೀ ಪ್ರಪಂಚ ನಿಂತಿರುವುದು ಶಿಕ್ಷಣದ ಮೇಲೆ. ಇಂದಿನ ಸ್ಪರ್ಧಾ ಯುಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಕೂಡ ಶಿಕ್ಷಣ ಅತ್ಯಗತ್ಯವಾಗಿದೆ. ಹಾಗಾಗಿ, ಪ್ರತಿಯೊಬ್ಬರು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಎಲ್ಲದಕ್ಕೂ ಒಂದು ಸೀಮಿತವೆಂಬುವುದಿರುತ್ತದೆ. ಆದರೆ, ಸೀಮಿತವಿಲ್ಲದೆ ಇರುವುದು ಶಿಕ್ಷಣ ಮಾತ್ರ. ಶಿಕ್ಷಣ ಮತ್ತು ಜ್ಞಾನದ ಆಧಾರದ ಮೇಲೆ ಪ್ರಪಂಚ ಬೆಳೆವಣಿಗೆ ನಿಂತಿದೆ. ಕತ್ತಿಗಿಂತ ಹೆಚ್ಚು ಪೆನ್ನು ಹರಿತವಾಗಿರುತ್ತದೆ. ರಾಜ್ಯದಲ್ಲಿ 46 ಸಾವಿರ ಸರಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳೂ ಸೇರಿದಂತೆ 57 ಸಾವಿರ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಶಿಕ್ಷಕರಿಗೆ ಗೌರವಯುತವಾಗಿ ವೇತನ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 1.16 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪೌಷ್ಟಿಕತೆ ಕೊರತೆ ನೀಗಿಸುವ ದೃಷ್ಟಿಯಿಂದ ₹೫೭ ಲಕ್ಷ ಮಕ್ಕಳಿಗೆ ಮೊಟ್ಟೆ, ಹಾಲು ಮತ್ತು ಊಟ ನೀಡಲಾಗುತ್ತಿದೆ. ಉಚಿತ ಪುಸ್ತಕ, ಸಮವಸ್ತ್ರ, ಶೂಗಳನ್ನು ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಎಲ್.ಕೆ.ಜಿ. ಯಿಂದ ದ್ವಿತೀಯ ಪಿಯುಸಿ ವರೆಗೆ ೧೪ ವರ್ಷಗಳ ಕಾಲ ಶಿಕ್ಷಣ ಪಡೆಯುವ ಮಕ್ಕಳಿಗೆ ಓದುವ ಹಾಗೂ ಬರೆಯುವ ಪುಸ್ತಕಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ. ಕರ್ನಾಟಕ ಸರ್ಕಾರದ ವತಿಯಿಂದ ನೈತಿಕ ವಿಜ್ಞಾನ ಕೂಡ ಒಂದು ವಿಷಯವನ್ನಾಗಿ ಪರಿಗಣಿಸಿ ಮಾನವಿಯತೆ ಗುಣ, ಮನುಷ್ಯತ್ವ ನೈತಿಕ ವಿಕಸನಕ್ಕೆ ಒತ್ತು ನೀಡಲಾಗುತ್ತಿದೆ.
ಭಾರತಿಯರು ಮತ್ತು ಟೆಬೇಟಿಯನ್ನರ ನಡುವೆ ಅಪಾರವಾದ ಪ್ರೀತಿ ವಿಶ್ವಾಸ ಹೊಂದಿದ್ದು, ಉತ್ತಮ ಸಂಬಂಧವಿದೆ. ಕೇವಲ ಶಿಕ್ಷಣಕ್ಕೆ ಮಾತ್ರವಲ್ಲ. ಬೇರೆ ಏನೇ ಸಮಸ್ಯೆ ಹಾಗೂ ಅವಶ್ಯಕತೆ ಇದ್ದರೂ ನಮ್ಮ ಸಹಾಯ ಸಹಕಾರ ಯಾವತ್ತೂ ತಮಗಿರುತ್ತದೆ ಎಂದರು.ಉಪ ವಿಭಾಗಾಧಿಕಾರಿ ಕಾವ್ಯರಾಣಿ, ಟಿಬೇಟಿಯನ್ ಮುಖ್ಯಸ್ಥ ಜಿಗ್ಮೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.