ಭಾರತದಲ್ಲಿನ ಕುಟುಂಬ ವ್ಯವಸ್ಥೆಗೆ ವಿಶ್ವ ಮೆಚ್ಚುಗೆ

KannadaprabhaNewsNetwork |  
Published : Nov 04, 2025, 04:15 AM IST
ಹಸಗಲಜಹಸಗದಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಭಾರತ ಜಗತ್ತಿನಲ್ಲಿ ಗುರುತಿಸಿಕೊಳ್ಳುವುದು ಇಲ್ಲಿನ ಸುಂದರ ಕುಟುಂಬ ವ್ಯವಸ್ಥೆಯಿಂದ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಭಾರತ ಜಗತ್ತಿನಲ್ಲಿ ಗುರುತಿಸಿಕೊಳ್ಳುವುದು ಇಲ್ಲಿನ ಸುಂದರ ಕುಟುಂಬ ವ್ಯವಸ್ಥೆಯಿಂದ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕೊಲ್ಹಾರ ಹೋಬಳಿ ಘಟಕ ಹಮ್ಮಿಕೊಂಡ ಆರ್‌ಎಸ್‌ಎಸ್‌ ತಾಲೂಕು ಪಥಸಂಚಲನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘ ಸಮಾಜದಲ್ಲಿ ವಿಲೀನವಾಗಿದೆ. ಸಕಲರು ಸಂಘವನ್ನು ಸ್ವೀಕರಿಸಿದ್ದು, ಇಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿದೆ. ಇಂದು ಸಂಘ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಆದರೆ, ದುರದೃಷ್ಟವಶಾತ ಬೇರೆ ಬೇರೆ ಕಾರಣಗಳಿಂದ ದೇಶದಲ್ಲಿ ಸಂಘವನ್ನು ಎರಡು ಸಲ ನಿಷೇಧ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಸಂಘ ಸಮಾಜದಲ್ಲಿ ಸಾಮರಸ್ಯ ತರಲು ಪಂಚ ಪರಿವರ್ತನೆಗಳನ್ನು ಹಮ್ಮಿಕೊಂಡಿದೆ. ಸಾಮಾಜಿಕ ಸಾಮರಸ್ಯ, ಪ್ರಕೃತಿ ಪಾಲನೆ, ಸ್ವದೇಶಿ ಮನೋಭಾವನೆ, ನಾಗರಿಕ ಶಿಷ್ಟಾಚಾರ, ಕುಟುಂಬ ಪ್ರಬೋಧನೆಗಳು ಪಂಚ ಪರಿವರ್ತನೆಗಳಾಗಿವೆ. ಭಾರತ ಇಡೀ ಜಗತ್ತಿನಲ್ಲಿ ಗುರುತಿಸಿಕೊಳ್ಳುವುದು ಇಲ್ಲಿನ ಕುಟುಂಬ ವ್ಯವಸ್ಥೆಯಿಂದ ಎಂದರು.

ಆಸಂಗಿ ಗದ್ದುಗೇಶ್ವರ ಹಿರೇಮಠದ ವೀರಬಸವ ದೇವರು ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಭಕ್ತಿಯನ್ನು ಬೆಳೆಸುತ್ತದೆ. ದೇಶವನ್ನು ಕಟ್ಟಬೇಕಾದ ಯುವಕರು ಸಾಮಾಜಿಕ ಜಾಲತಾಣದಲ್ಲಿ ತೊಡಗಿ ನಿತ್ಯ ಮೊಬೈಲ್, ಟಿವಿ, ದುಶ್ಚಟಗಳ ದಾಸರಾಗುತ್ತಿದ್ದಾರೆ. ತಂದೆ ತಾಯಿಗಳ ಮಾತನ್ನು ಮಕ್ಕಳು ಕೇಳಬೇಕು. ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಹಜ. ಜಗತ್ತಿನಲ್ಲಿ ಭಾರತ ಜಗದ್ಗುರುವಾಗಬೇಕಾದರೆ ಮೊದಲು ನಾವು ಬದಲಾಗಬೇಕು. ಪರಸ್ಪರ ದ್ವೇಷದಿಂದ ಬದುಕುವ ಬದಲು ಪ್ರೀತಿಯಿಂದ ಬದುಕುವುದನ್ನ ಕಲಿಯಬೇಕು. ದೇಶಕ್ಕಾಗಿ ಸ್ವಾಮಿ ವಿವೇಕಾನಂದರು, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣನಂತಹ ಮಹಾನಾಯಕರು ದುಡಿದಿದ್ದಾರೆ ಎಂದು ಸ್ಮರಿಸಿದರು.

ಸಂಘ ಶತಾಬ್ದಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಳೀಯ ಹೋಬಳಿ ಘಟಕದಿಂದ ಭವ್ಯವಾದ ಪಥಸಂಚಲನ ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. ದಿಗಂಬರೇಶ್ವರ ಮಠ ಬಸ್ ನಿಲ್ದಾಣದಿಂದ ಪ್ರಾರಂಭವಾದ ಗಣವೇಶಧಾರಿ ಸ್ವಯಂಸೇವಕರ ಪಥಸಂಚಲನವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ತಲುಪಿತು.ಪಥಸಂಚಲನ ಹಾಯ್ದು ಹೋಗುವ ದಾರಿಯಲ್ಲಿ ರಂಗೋಲಿ ಚಿತ್ತಾರ ಹಾಕಿ ಸಿಂಗಾರ ಮಾಡಲಾಗಿತ್ತು, ಗಣವೇಷಧಾರಿಗಳಿಗೆ ಪುಷ್ಪ ವೃಷ್ಟಿಗೈದು ಸ್ವಾಗತಿಸಲಾಯಿತು.ತೆರೆದ ವಾಹನದಲ್ಲಿ ಭಾರತ ಮಾತೆಯ ಮತ್ತು ಆರ್ ಎಸ್ ಎಸ್ ಸ್ಥಾಪಕರಾದ ಡಾ.ಹೆಡಗೆವಾರ ಹಾಗೂ ಗುರೂಜಿಯವರ ಭಾವಚಿತ್ರದ ಮೆರವಣಿಗೆಯು ನಡೆಯಿತು. ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಮತ್ತು ಇದೇ ಪ್ರಥಮ ಬಾರಿಗೆ ಸುಮಾರು ಅರವತ್ತಕ್ಕೂ ಹೆಚ್ಚು ಬಾಲಕ ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಒಟ್ಟು 750ಕ್ಕೂ ಹೆಚ್ಚು ಗಣವೇಷದಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಬಸವನಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಶರಣಗೌಡ ಪಾಟೀಲ, ಪಿಎಸ್ ಐ ಅಶೋಕ ನಾಯಕ ನೇತೃತ್ವದಲ್ಲಿ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ