ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ
ಪಾಂಡವಪುರ: ಸಮಾಜದ ಒಳಿತಿಗಾಗಿ ಸ್ವ ಇಚ್ಛೆಯಿಂದ ಮಾಡುವ ಉತ್ತಮ ಕೆಲಸಗಳು ಮನಸ್ಸಿಗೆ ಸಂತೋಷ ಕೊಡುವ ಜೊತೆಗೆ ಕೆಲಸಕ್ಕೂ ಸಾರ್ಥಕತೆ ದೊರೆಯುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಹೇಳಿದರು.ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂಕಮ್ಮ ಮತ್ತು ಸಣ್ಣತಮ್ಮೇಗೌಡರ ಸ್ಮರಣೆಯ ಅರ್ಪಣೆ ಕಾರ್‍ಯಕ್ರಮದ ಅಂಗವಾಗಿ ರೆಡ್‌ಕ್ರಾಸ್ ಸಂಸ್ಥೆ, ಐಕ್ಯೂಎಸಿ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಹಾದಾನ. ಪ್ರತಿಯೊಬ್ಬ ವಿದ್ಯಾರ್ಥಿಯೂ ರಕ್ತದಾನ ಮಾಡುವುದರಿಂದ ರಕ್ತದ ಒತ್ತಡ ಕಡಿಮೆಯಾಗಿ ಉತ್ತಮ ಆರೋಗ್ಯ ಹೊಂದಬಹುದು. ಜತೆಗೆ ಹೊಸ ರಕ್ತ ಉತ್ಪಾದನೆಯಾಗಲಿದೆ. ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಿದಂತಾಗಿತ್ತದೆ ಎಂದರು.ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ರಕ್ತದಾನ ಮಾಡುವ ಬಗ್ಗೆ ಸರಿಯಾದ ಅರಿವಿನ ಕೊರತೆ ಇದೆ. ರಕ್ತದಾನ ಮಾಡುವುದರಿಂದ ನಮಗೆ ಆರೋಗ್ಯದಲ್ಲಿ ಏನೋ ಸಮಸ್ಯೆಯಾಗಲಿದೆ ಎಂಬ ಮೂಢನಂಬಿಕೆ ಇದೆ. ಅದನ್ನು ಹೋಗಲಾಡಿಸಬೇಕು, ರಕ್ತದಾನ ಮಾಡುವ ವಿದ್ಯಾರ್ಥಿಗಳು ಆರೋಗ್ಯವಂತರಾಗಿರಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿದರು.ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಸುಮಾರು 76 ಯೂನಿಟ್ ರಕ್ತವನ್ನು ಸಂಗ್ರಹಿಸಿ ದಾನ ಮಾಡಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರವಾನಿಸಲಾಯಿತು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಅಭಿತ, ಲ್ಯಾಬ್ ತಂತ್ರಜ್ಞ ಶಂಕರ್, ಕನ್ನಡ ವಿಭಾಗದ ಮುಖ್ಯಸ್ಥ ವಿ.ಶ್ರೀಧರ, ರೆಡ್ ಕ್ರಾಸ್ ಘಟಕದ ಸಂಯೋಜಕಿ ಧನಲಕ್ಷ್ಮೀ.ಆರ್, ಐಕ್ಯೂಎಸಿ ಸಂಯೋಜಕ ರಘುನಂದನ್.ಡಿ, ನ್ಯಾಕ್ ಕಮಿಟಿ ಸಂಯೋಜಕ ಚರಣ್‌ರಾಜ್.ಎಚ್ ಸೇರಿ ಹಲವರು ಹಾಜರಿದ್ದರು.