- ದಸರಾ ಹಿನ್ನೆಲೆ ಜಾತಿಗಣತಿ ಮುಂದೂಡಲು ಮಹಾಸಭಾದ ಎನ್.ರುದ್ರಮುನಿ ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಅ.7 ರವರೆಗೆ ಕೈಗೊಳ್ಳುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಮತ್ತು ಉಪ ಜಾತಿ ಕಾಲಂನಲ್ಲಿ ಛಲವಾದಿ ಬರೆಸುವಂತೆ ಸಮಾಜ ಬಾಂಧವರಿಗೆ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾತಿ, ಸಾಮಾಜಿಕ ಮತ್ತು ಶೈಕ್ಷಮಿಕ ಸಮೀಕ್ಷೆಯ ಆರ್ಥಿಕ ಸ್ಥಿತಿಗತಿಗಳ ಆಯೋಗವು ಸಮೀಕ್ಷೆ ಕೈಗೊಳ್ಳುತ್ತಿದೆ. ಗಣತಿಗಾರರು ನಿಮ್ಮ ಮನೆ, ನಿಮ್ಮ ಬಳಿ ಬಂದಾಗ ಬಲಗೈ ಸಮುದಾಯದ ಬಂಧುಗಳು ಛಲವಾಗಿ ಎಂಬುದಾಗಿ ನಮೂದಿಸುವುದರಿಂದ ಸಮಾಜದ ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಸಹಾಯಕವಾಗುತ್ತದೆ. ಗಣತಿದಾರರು ಬಂದಾಗ ಬಲಗೈ, ಛಲವಾದಿ, ವಲಯ, ಮಹರ್, ಮಾಲಾ, ಪರಯನ್ ಹಾಗೂ ಬಲಗೈ ಸಂಬಂಧಿಸಿದ ಸಮುದಾಯದವರು ಕಡ್ಡಾಯವಾಗಿ ಜಾತಿಗಣತಿಯಲ್ಲಿ ಬಲಗೈ ಸಂಬಂಧಿತ ಜಾತಿಗಳನ್ನು ಮಾತ್ರ ನಮೂದಿಸಬೇಕು. ಯಾವುದೇ ಕಾರಣಕ್ಕೂ ಆದಿದ್ರಾವಿಡ, ಆದಿ ಆಂಧ್ರ ಅಥವಾ ಆದಿ ಕರ್ನಾಟಕ ಅಂತೆಲ್ಲಾ ನಮೂದಿಸಬಾರದು. ಈ ಬಗ್ಗೆ ಸಮಾಜದಿಂದಲೂ ಛಲವಾದಿ ಸಮಾಜ ಬಾಂಧವರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ದಸರಾ ಹಿನ್ನೆಲೆ ಸಮೀಕ್ಷೆ ಮುಂದೂಡಿ:ಜಾತಿಗಣತಿ ದಿನಾಂಕ ಮುಂದೂಡುವಂತೆ ಛಲವಾದಿ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ, ಆಯೋಗಕ್ಕೆ, ಇಲಾಖೆಗೆ ಮನವಿ ಮಾಡಿದೆ. ದಸರಾ ಹಬ್ಬ ಸಹ ಸೆ.22ರಿಂದಲೇ ಆರಂಭ ಹಿನ್ನೆಲೆ ಎಲ್ಲರೂ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಹಾಗಾಗಿ, ಹಬ್ಬ ಮುಗಿಯುವವರೆಗೂ ಜಾತಿಗಣತಿ ಕಾರ್ಯ ಕೈಗೊಳ್ಳುವುದು ಬೇಡವೇ ಬೇಡ ಎಂಬುದಾಗಿ ಮಹಾಸಭಾ ಮನವಿ ಮಾಡಿದೆ. ಹಬ್ಬ ಮುಗಿದ ನಂತರ ಗಣತಿ ಕಾರ್ಯ ಕೈಗೊಳ್ಳುವುದು ಸೂಕ್ತ ಎಂದು ಎನ್.ರುದ್ರಮುನಿ ಹೇಳಿದರು.
ಮಹಾಸಭಾ ಜಿಲ್ಲಾ ಗೌರವಾಧ್ಯಕ್ಷ, ಸಮಾಜದ ಹಿರಿಯ ಮುಖಂಡ ಎಸ್.ಶೇಖರಪ್ಪ ಮಾತನಾಡಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್ ಅವರಿಗೆ ಆಹ್ವಾನಿಸಿದ್ದಕ್ಕೆ ಟೀಕಿಸುವ ಭರದಲ್ಲಿ ದಲಿತ ಮಹಿಳೆಯರಿಗೆ ಅವಮಾನಿಸಿದ್ದು ಖಂಡನೀಯ. ಯಾವುದೇ ಜಾತಿ, ಧರ್ಮದ ಮಹಿಳೆಯರಿಗೆ ಅವಮಾನಿಸಿದರೂ ಅದು ಖಂಡನೀಯ ಎಂದರು.ಮುಖಂಡರಾದ ಟಿ.ಎಸ್.ರಾಮಯ್ಯ, ಎ.ಡಿ.ರೇವಣಸಿದ್ದಪ್ಪ, ನಾಗಭೂಷಣ್, ಎಚ್.ಜಯಣ್ಣ, ಬಸವನಾಳ್ ಹಾಲೇಶ, ಎಲ್.ಟಿ.ಮಧುಸೂದನ, ಹನುಮಂತಪ್ಪ, ಜಯಪ್ರಕಾಶ, ಎಂ.ಸಿ.ಓಂಕಾರಪ್ಪ, ಜಗಳೂರು ವೀರಸ್ವಾಮಿ ಇತರರು ಇದ್ದರು.
- - --21ಕೆಡಿವಿಜಿ1:
ದಾವಣಗೆರೆಯಲ್ಲಿ ಭಾನುವಾರ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.