ಸಾಹಿತಿ ತಿಲಕನಾಥ ಮಂಜೇಶ್ವರ ಪ್ರತಿಭಟನೆ ಅಂತ್ಯ

KannadaprabhaNewsNetwork |  
Published : Apr 06, 2026, 03:00 AM IST
04ತಿಲಕನಾಥ | Kannada Prabha

ಸಾರಾಂಶ

: ಹಿರಿಯ ಪತ್ರಕರ್ತ, ಸಾಹಿತಿ ತಿಲಕನಾಥ ಮಂಜೇಶ್ವರ ಅವರು ರಚಿಸಿದ ಕೃತಿಗಳನ್ನು ಉಡುಪಿ ತಾಲೂಕು ಪರಿಷತ್‌ ಖರೀದಿಸುವ ಮೂಲಕ ಅವರು ರಾಜ್ಯ ಸರ್ಕಾರದ ಗ್ರಂಥಾಲಯ ಇಲಾಖೆ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಳಿಸಿದ್ದಾರೆ.

ಮಣಿಪಾಲ: ಹಿರಿಯ ಪತ್ರಕರ್ತ, ಸಾಹಿತಿ ತಿಲಕನಾಥ ಮಂಜೇಶ್ವರ ಅವರು ರಚಿಸಿದ ಕೃತಿಗಳನ್ನು ಉಡುಪಿ ತಾಲೂಕು ಪರಿಷತ್‌ ಖರೀದಿಸುವ ಮೂಲಕ ಅವರು ರಾಜ್ಯ ಸರ್ಕಾರದ ಗ್ರಂಥಾಲಯ ಇಲಾಖೆ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಳಿಸಿದ್ದಾರೆ.ಐದು ವರ್ಷಗಳ ಹಿಂದೆ ರಾಜ್ಯ ಗ್ರಂಥಾಲಯ ಇಲಾಖೆಯು ತನ್ನ ಸಗಟು ಖರೀದಿ ಯೋಜನೆಯಡಿ ತಿಲಕನಾಥ ಅವರ ಕೃತಿಗಳನ್ನು ಖರೀದಿಗೆ ಆಯ್ಕೆ ಮಾಡಿದ್ದರೂ, ಇವತ್ತಿಗೂ ಖರೀದಿಸದೆ ಇದ್ದುದರಿಂದ ನೊಂದ ಅವರು ಏ. 3ರಿಂದ ಮಣಿಪಾಲದ ಬಸ್ ನಿಲ್ದಾಣ ಬಳಿ ಸಂತೆಯಲ್ಲಿ ಕುಳಿತು ತಮ್ಮ 110 ರು. ಮುಖಬೆಲೆಯ ಪುಸ್ತಕವನ್ನು ಕೇವಲ 10 ರು.ಗೆ ಮಾರಾಟ ಮಾಡುವ ಮೂಲಕ ಸೌಮ್ಯ ರೀತಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದರು.ಅವರ ಪ್ರತಿಭಟನೆಯನ್ನು ಸಾಹಿತ್ಯ ಪ್ರೇಮಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಶನಿವಾರ ಪ್ರತಿಭಟನಾನಿರತ ತಿಲಕನಾಥ ಅವರ ಬಳಿಗೆ ತೆರಳಿ ಅವರ ಎಲ್ಲ ಕೃತಿಗಳನ್ನು ತಾಲೂಕು ಪರಿಷತ್ತಿನ ಮೂಲಕ ನಾವು ಮುಖಬೆಲೆಯಲ್ಲೇ ಖರೀದಿಸುತ್ತೇವೆ, ಈ ಇಳಿ ವಯಸ್ಸಿನಲ್ಲಿ ಹೀಗೆ ಪ್ರತಿಭಟನೆ ಬೇಡ ಎಂದು ಮನವೂಲಿಸುವ ಪ್ರಯತ್ನ ಮಾಡಿದರು.

ಆದರೆ ತಿಲಕನಾಥ ಅವರು, ದುಡ್ಡಿಗಾಗಿ ನಾನು ಪುಸ್ತಕಗಳನ್ನು ಮಾರುತ್ತಿಲ್ಲ, ಸರಕಾರದ ನಿರ್ಲಕ್ಷದ ವಿರುದ್ಧ ನನ್ನ ಸೌಮ್ಯ ಪ್ರತಿಭಟನೆ ಇದು. ಆದ್ದರಿಂದ ನೀವು ಒಂದು ಪುಸ್ತಕಕ್ಕೆ 10 ರು.ಗಳಂತೆ ಕೊಟ್ಟು ನಿಮಗೆ ಬೇಕಾದಷ್ಟು ಪ್ರತಿಗಳನ್ನು ಖರೀದಿಸಿ ಎಂದರು.ಕೊನೆಗೆ ಸಮಾಜ ಸೇವಕ, ತಾಲೂಕು ಕಸಾಪ ಗೌರವ ಸಲಹೆಗಾರ ವಿಶ್ವನಾಥ್ ಶೆಣೈ ಅವರು, ತಾಲೂಕು ಪರಿಷತ್‌ ವತಿಯಿಂದ ನಿಮ್ಮ ಎಲ್ಲ ಕೃತಿಗಳನ್ನು ನಾನು ಖರೀದಿಸಿ, ಪರಿಷತ್ತಿನ ಗ್ರಂಥಾಲಯ ಅಭಿಯಾನಕ್ಕೆ ನೀಡುವೆ ಎಂದು ಹೇಳಿ ಪ್ರತಿಗಳನ್ನು ಖರೀದಿಸಿ ತಿಲಕನಾಥ ಅವರ ಪ್ರತಿಭಟನೆಗೆ ಪೂರ್ಣವಿರಾಮ ಹಾಕಿದರು.

ರಾಜ್ಯ ಸರ್ಕಾರವು ಜ್ಞಾನವೃದ್ಧ ಸಾಹಿತಿಗಳ ಪ್ರತಿಭಟನೆಯಿಂದ ಎಚ್ಚೆತ್ತುಕೊಳ್ಳಲಿ. ಯಾವುದೇ ಬರಹಗಾರರನ್ನು ನಿರ್ಲಕ್ಷಿಸದಿರಲಿ. ಇನ್ನೊಮ್ಮೆ ಯಾವುದೇ ಸಾಹಿತಿಗಳು ಬೀದಿಗೆ ಬಂದು ಪುಸ್ತಕ ಮಾರುವಂತಾಗದಿರಲಿ. ಸಂಬಂಧ ಪಟ್ಟ ಇಲಾಖೆಯವರು ತಕ್ಷಣ ಗಮನ ಹರಿಸಿ ನ್ಯಾಯ ಒದಗಿಸಬೇಕು ಎಂದು ತಾಲೂಕು ಕಸಾಪ ಆಗ್ರಹಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡತನ ನೀಗಿದ್ದರೆ ಪ್ರಚಾರಕ್ಕೆ 5 ದಿನ ಬರಬೇಕಿತ್ತಾ?: ಕುಮಾರಸ್ವಾಮಿ
ಕಾರಜೋಳ-ಚರಂತಿಮಠ ಜೋಡಿ ಬಾಗಲಕೋಟೆ ಅಭಿವೃದ್ಧಿಗೆ ಮಾರಕ: ತಿಮ್ಮಾಪೂರ