ಕನ್ನಡಪ್ರಭ ವಾರ್ತೆ ಮಂಗಳೂರು
ಜೀವನವು ಪ್ರಕೃತಿ ಮತ್ತು ವಿಕೃತಿ ನಡುವಿನ ನಿರಂತರ ಸಂಘರ್ಷ. ಈ ಹೋರಾಟವು ಹೌದು ಮತ್ತು ಇಲ್ಲ ಎಂಬ ಆಯ್ಕೆಗಳಿಂದ ತುಂಬಿದೆ. ಪ್ರತಿಯೊಬ್ಬ ಮನುಷ್ಯನೂ ಈ ನಿರ್ಧಾರಗಳ ಮೂಲಕ ತಮ್ಮ ದಾರಿಯನ್ನು ಕಂಡುಕೊಳ್ಳುತ್ತಾನೆ. ಸಾಹಿತ್ಯದ ಪಾತ್ರವು ಈ ಗೊಂದಲದಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ ಮಾವ್ಜೊ ಅಭಿಪ್ರಾಯಪಟ್ಟಿದ್ದಾರೆ.ನಗರದ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕವಿ, ವಿಮರ್ಶಕ ಎಚ್.ಎಂ. ಪೆರ್ನಾಲ್ ಅವರ ಕವಿತಾ ಸಂಕಲನ ‘ಜನೆಲ್’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದಿನ ಓದುಗರು ಬದಲಾಗಿದ್ದಾರೆ. ಅವರು ಸಾಹಿತ್ಯದಲ್ಲಿ ತಮ್ಮನ್ನು ತಾವು ಹುಡುಕುತ್ತಾರೆ. ಬರಹಗಾರರು ಓದುಗರ ಧ್ವನಿಯಾಗಬೇಕು. ಎಚ್‌ಎಂ ಪೆರ್ನಾಲ್ ಅವರ ಕವಿತೆಗಳು ಈ ಸಂಘರ್ಷವನ್ನು ಪ್ರತಿಧ್ವನಿಸುತ್ತವೆ. ಅವರ ಕವಿತೆಗಳು ಆಗಾಗ್ಗೆ ಕಗ್ಗತ್ತಲೆಯ ಛಾಯೆಯನ್ನು ಹೊಂದಿರುತ್ತವೆ, ಆದರೆ ಆ ಕಗ್ಗತ್ತಲೆಯೊಳಗೆ ಸತ್ಯವಿದೆ, ಅದನ್ನು ವಿಶಿಷ್ಟ ವ್ಯಂಗ್ಯದೊಂದಿಗೆ ಮಂಡಿಸಲಾಗಿದೆ ಎಂದು ಮಾವ್ಜೋ ಹೇಳಿದರು. ಮುಖ್ಯ ಅತಿಥಿ ವಿಶನ್ ಕೊಂಕಣಿ ಪ್ರವರ್ತಕ ಮೈಕಲ್ ಡಿಸೋಜ ಮಾತನಾಡಿ, ನಮ್ಮ ಪೋಷಕರು, ನಮ್ಮ ಮಾತೃಭಾಷೆ ಮತ್ತು ನಮ್ಮ ಮಾತೃಭೂಮಿಯನ್ನು ಎಂದೂ ಮರೆಯಬಾರದು. ಎಚ್‌ಎಂ ಪೆರ್ನಾಲ್ ಮತ್ತು ಅವರ ಸಹವರ್ತಿಗಳು ತಮ್ಮ ಸಾಹಿತ್ಯ ಪ್ರಯತ್ನಗಳ ಮೂಲಕ ಈ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ ಎಂದರು.ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಲಹಾ ಸಮಿತಿ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಜನೆಲ್ ಪುಸ್ತಕವನ್ನು ಪರಿಚಯಿಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮತ್ತು ಕವಿತಾ ಟ್ರಸ್ಟ್‌ನ ಅಧ್ಯಕ್ಷ ಕಿಶೂ ಬಾರ್ಕೂರ್ ವೇದಿಕೆಯಲ್ಲಿದ್ದರು. ಎಚ್‌ಎಂ ಪೆರ್ನಾಲ್ ಸ್ವಾಗತಿಸಿದರು. ಕವಿ, ಚಿಂತಕ ಟೈಟಸ್ ನೊರೊನ್ಹಾ ನಿರೂಪಿಸಿದರು.