₹2500 ಬದಲು ₹1500 ಬರ ಪರಿಹಾರ: ಯಾದಗಿರಿ ರೈತರಿಗೆ ಶಾಕ್‌!

Published : Nov 10, 2026, 06:00 AM IST
drought

ಸಾರಾಂಶ

ತೀವ್ರ ಬರಗಾಲದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ನೆರವಾಗಲು ₹5000 ಬರ ಪರಿಹಾರ (ಇನ್‌ಪುಟ್‌ ಸಬ್ಸಿಡಿ) ಘೋಷಿಸಿ, ಮೊದಲ ಕಂತಿನಲ್ಲಿ 2500 ರು.ಗಳನ್ನು ಸರ್ಕಾರವೇನೋ ಬಿಡುಗಡೆ ಮಾಡಿದೆ.

 ಆನಂದ್‌ ಎಂ. ಸೌದಿ

ಯಾದಗಿರಿ : ತೀವ್ರ ಬರಗಾಲದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ನೆರವಾಗಲು ₹5000 ಬರ ಪರಿಹಾರ (ಇನ್‌ಪುಟ್‌ ಸಬ್ಸಿಡಿ) ಘೋಷಿಸಿ, ಮೊದಲ ಕಂತಿನಲ್ಲಿ 2500 ರು.ಗಳನ್ನು ಸರ್ಕಾರವೇನೋ ಬಿಡುಗಡೆ ಮಾಡಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಒಬ್ಬೊಬ್ಬ ರೈತರಿಗೆ ಒಂದೊಂದು ಮೊತ್ತ ಪಾವತಿಯಾಗುತ್ತಿರುವುದರಿಂದ ರೈತರು ಅಚ್ಚರಿಗೊಂಡಿದ್ದಾರೆ.

ಮೊದಲ ಕಂತಿನಲ್ಲಿ 2500 ರು. ಬರ ಪರಿಹಾರ ಸಿಗಲಿದೆ ಎಂದು ರೈತರು ಭಾವಿಸಿದ್ದರು. ಆದರೆ ಬ್ಯಾಂಕ್‌ ಖಾತೆಗೆ 1500 ರು., 2000 ರು. ಹಾಗೂ 2500 ರು. ಹೀಗೆ ಒಂದೊಂದು ಮೊತ್ತ ಜಮೆಯಾಗುತ್ತಿರುವುದರಿಂದ ರೈತರು ಚಕಿತಗೊಂಡಿದ್ದಾರೆ.

ಬರಪೀಡಿತ ತಾಲೂಕುಗಳ ರೈತರಿಗೆ 2500 ರು. ಬರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ನ.5ರಂದು ಯಾದಗಿರಿ ಜಿಲ್ಲೆಯ ರೈತರ ಜತೆ ಸಂವಾದ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಪರಿಹಾರ ಮೊತ್ತವನ್ನು 5000 ರು.ಗೆ ಏರಿಸಲಾಗಿದೆ, ಮೊದಲ ಕಂತಿನಲ್ಲಿ 2500 ರು. ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿ ಹಣ ವರ್ಗಾವಣೆಗೆ ಚಾಲನೆ ನೀಡಿದ್ದರು. ಹೀಗಾಗಿ ರೈತರು ಮೊದಲ ಕಂತಿನಲ್ಲಿ 2500 ರು. ಸಿಗಲಿದೆ ಎಂದೇ ಭಾವಿಸಿದ್ದರು. ಈಗ ಎಣಿಸಿದ್ದಷ್ಟು ಮೊತ್ತ ಸಿಗದಿರುವುದಕ್ಕೆ ಬೇಸರಗೊಂಡಿದ್ದಾರೆ.

ಅರ್ಧ ಹಣ ಏಕೆ?:

‘ಮೊದಲ ಕಂತಿನಲ್ಲಿ ₹2500 ಹಣ ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗುವುದಲ್ಲದೆ, ಮುಂದಿನ ದಿನಗಳಲ್ಲಿ ಇನ್ನುಳಿದ ಹಣವನ್ನೂ ಬಿಡುಗಡೆ ಮಾಡುವುದಾಗಿ ಸಿಎಂ ಹೇಳಿದ್ದರು. ಈಗ ಬ್ಯಾಂಕುಗಳಿಂದ ರೈತರ ಖಾತೆಗಳಿಗೆ ಅರ್ಧಂಬರ್ಧ ಹಣ ಜಮೆಯಾಗುತ್ತಿರುವುದು ಏಕೆ?’ ಎಂದು ಪ್ರಗತಿಪರ ರೈತ ಹಾಗೂ ಅತ್ಯುತ್ತಮ ಕೃಷಿಕ ರಾಜ್ಯ ಪ್ರಶಸ್ತಿ ಪುರಸ್ಕೃತ, ಶಹಾಪುರ ತಾಲೂಕಿನ ಮುಡಬೂಳದ ಅಶೋಕರಾವ್ ಮಲ್ಲಾಬಾದಿ ಪ್ರಶ್ನಿಸಿದ್ದಾರೆ. ನಮ್ಮೂರಿನ ಅನೇಕರಿಗೆ ₹2500 ಬದಲು, ₹2000 ಅಥವಾ ₹1500 ಹಣ ಜಮೆಯಾಗಿದೆ ಎಂದಿದ್ದಾರೆ.

ಸೋಮವಾರ ಉಳಿತಾಯ ಖಾತೆಗೆ ಜಮೆಯಾದ ಹಣ ಯಾವುದು ಎಂದು ಬ್ಯಾಂಕಿಗೆ ಹೋಗಿ ಕೇಳಿದರೆ, ಸರ್ಕಾರದ ಇನ್ಪುಟ್‌ ಸಬ್ಸಿಡಿ ಹಣದ ಮೊದಲ ಕಂತು ಎಂದು ಬ್ಯಾಂಕಿನವರು ಹೇಳುತ್ತಿದ್ದಾರೆ. ₹2500 ಬದಲು ₹1500 ಇದೆಯಲ್ಲ ಎಂದು ಬ್ಯಾಂಕಿನವರಿಗೆ ಪ್ರಶ್ನಿಸಿದರೆ, ತಮಗೇನೂ ಗೊತ್ತಿಲ್ಲ ಎಂದು ಉತ್ತರಿಸುತ್ತಾರೆ ಎಂದು ಮುಡಬೂಳದ ರೈತ ಬಸಣ್ಣ ಕಾಳಪ್ಪ ಚೆನ್ನಪಟ್ಟಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿರುವ ತಮ್ಮ ಖಾತೆಗೂ ಸೋಮವಾರ ಬೆಳಗ್ಗೆ ₹2000 ಹಣ ಜಮೆಯಾಗಿದೆ. ಇನ್ನೈದು ನೂರು ಏಕೆ ಹಾಕಿಲ್ಲ ಎಂದು ಗೊತ್ತಾಗಿಲ್ಲ. ಕೇಳಿದರೆ ಇಷ್ಟೇ ಬಂದಿರುವುದು ಅಂತಾರೆ ಎಂದು ಮುಡಬೂಳ ಗ್ರಾಮದ ಮಲ್ಲಿಕಾರ್ಜುನ ಬುಸಾ ಅಚ್ಚರಿ ವ್ಯಕ್ತಪಡಿಸಿದರು.

₹17.43 ಕೋಟಿ ಬಿಡುಗಡೆ

ಯಾದಗಿರಿ ಜಿಲ್ಲೆಯ 1.06 ಲಕ್ಷ ರೈತರಿಗೆ ತಲಾ ₹2500 ಗಳಂತೆ ಒಟ್ಟು ₹17.43 ಕೋಟಿ ಹಣವನ್ನು ಸಿಎಂ ಡಿಕೆಶಿ ಬಿಡುಗಡೆ ಮಾಡಿದ್ದರು. ಈ ಮೂಲಕ, ರಾಜ್ಯದ 226 ಬರಪೀಡಿತ ತಾಲೂಕುಗಳ ರೈತರಿಗೆ ಮೊದಲ ಕಂತಿನ ಪರಿಹಾರ ಬಿಡುಗಡೆಯಾದಂತಾಗಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದು ರೈತರಿಗೆ ಕೊಂಚ ನಿರುಮ್ಮಳ ಮೂಡಿಸಲಿದೆ ಎನ್ನುವುದು ಸರ್ಕಾರದ ಚಿಂತನೆಯಾಗಿತ್ತು.

- ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆ: ಮೊದಲು 2500 ರು. ಇನ್‌ಪುಟ್‌ ಸಬ್ಸಿಡಿ ಘೋಷಿಸಿದ್ದ ಸರ್ಕಾರ

- ಆಲ್ಪ ಮೊತ್ತ ಎಂದು ವಿಪಕ್ಷಗಳ ಆಕ್ಷೇಪ. ಬಳಿಕ ಹಣ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರಕ್ಕೆ ತರಾಟೆ

- ಪರಿಹಾರವನ್ನು ₹5000ಕ್ಕೆ ಹೆಚ್ಚಳ ಮಾಡಿ, ಮೊದಲ ಕಂತಲ್ಲಿ ₹2500 ನೀಡುತ್ತೇವೆ ಎಂದಿದ್ದ ಸರ್ಕಾರ

- ನ.5ರಂದು ಯಾದಗಿರಿ ಜಿಲ್ಲೆಯ ರೈತರಿಗೆ ಹಣ ವರ್ಗಾವಣೆಗೆ ಚಾಲನೆ ನೀಡಿದ್ದ ಮುಖ್ಯಮಂತ್ರಿ

- ₹2500 ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು. ಆದರೆ ಒಬ್ಬೊಬ್ಬ ರೈತರಿಗೆ ಒಂದೊಂದು ಮೊತ್ತ

2500 ರು. ಬದಲು ಕಡಿಮೆ ಮೊತ್ತ ಏಕೆ?

ಬರ ಪರಿಸ್ಥಿತಿಯ ಈ ವೇಳೆ ರಾಜ್ಯ ಸರ್ಕಾರ ರೈತರ ನೆರವಿಗೆ ಬಂದಿರುವುದು ಶ್ಲಾಘನೀಯ. ಒಟ್ಟು ₹5000 ಇನ್ಪುಟ್‌ ಸಬ್ಸಿಡಿಯಲ್ಲಿ ಮೊದಲ ಕಂತಿನಲ್ಲಿ ₹2500 ಹಾಗೂ ಉಳಿದ ₹2500 ಹಣವನ್ನು 2ನೇ ಕಂತಿನಲ್ಲಿ ಹಾಕುವುದಾಗಿ ಖುದ್ದು ಸಿಎಂ ಅವರೇ ತಿಳಿಸಿದ್ದಾರೆ. ಹಾಗಿರುವಾಗ ಈಗ ಜಮೆಯಾಗಿರುವ ಅರ್ಧ ಹಣ ಯಾವ ಲೆಕ್ಕ ಎಂದು ಗೊತ್ತಾಗುತ್ತಿಲ್ಲ.

- ಅಶೋಕರಾವ್ ಮಲ್ಲಾಬಾದಿ, ರಾಜ್ಯ ಪ್ರಶಸ್ತಿ ಪುರಸ್ಕೃತ ರೈತ

PREV
Stay informed with the latest news and developments from Yadgir district (ಯಾದಗಿರಿ ಸುದ್ದಿ) — including local politics, agriculture, civic issues, social events, environment, community affairs and regional reports on Kannada Prabha News.
Read more Articles on

Recommended Stories

ಆಹಾರ ಘಟಕ ತಾಂತ್ರಿಕ ಸಲಕರಣೆ ಅಭಿವೃದ್ಧಿಪಡಿಸಿ ಮಹೇಶ ಬಾಬು
ಚಾಲಕರು ವಾಹನದ ಮೂಲ ದಾಖಲೆ ವಿಮೆ ಇಟ್ಟುರಕೊಳ್ಳಿ: ಬಸ್ಸುಗೌಡ