ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ ಹಾಗೂ ತಾತ್ಕಾಲಿಕ ಆಶ್ರಯ ವ್ಯವಸ್ಥೆಗಳನ್ನು ಒನ್-ಸ್ಟಾಪ್ ಸೆಂಟರ್‌ನಲ್ಲಿ ಉತ್ತಮ ರೀತಿಯಲ್ಲಿ ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಮಹೇಶ ಬಾಬು ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ ಹಾಗೂ ತಾತ್ಕಾಲಿಕ ಆಶ್ರಯ ವ್ಯವಸ್ಥೆಗಳನ್ನು ಒನ್-ಸ್ಟಾಪ್ ಸೆಂಟರ್‌ನಲ್ಲಿ ಉತ್ತಮ ರೀತಿಯಲ್ಲಿ ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಮಹೇಶ ಬಾಬು ಸೂಚಿಸಿದರು.ಜಿಲ್ಲೆಯ ಸಖಿ-ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಬೀದರ ತಾಲ್ಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಘಟಕದಲ್ಲಿ ತಾಂತ್ರಿಕ ಸಲಕರಣೆಗಳನ್ನು ಅಭಿವೃದ್ಧಿಪಡಿಸುವಂತೆ ತಿಳಿಸಿದರು.
ಬೀದರ ಜಿಲ್ಲೆಯ ಕಚೇರಿಗಳು ಹಾಗೂ ಅಧೀನ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಇಲಾಖೆಯ ಸುಧಾರಣಾ ಸಂಸ್ಥೆಗಳಾದ ಮೈಲೂರಿನ ಸರ್ಕಾರಿ ಬಾಲಕಿಯರ ವಸತಿ ನಿಲಯ, ಸರ್ಕಾರಿ ಬಾಲಕರ ವಸತಿ ನಿಲಯ ಹಾಗೂ ಪರಿವೀಕ್ಷಣಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಮಾಂತರ ಹಾಗೂ ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಾಗೂ ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ಇಲಾಖೆಯಿಂದ ಬಾಲಕಿಯರ ವಸತಿ ನಿಲಯಗಳನ್ನು ನಡೆಸಲಾಗುತ್ತಿದ್ದು, ನಿಲಯದ ಫಲಾನುಭವಿಗಳಿಗೆ ಗುಣಮಟ್ಟದ ಊಟ ಕಲ್ಪಿಸುವಂತೆ ಸೂಚನೆ ನೀಡಿದರು.
ಬೀದರನ ಬಾಲಭವನ ಸಭಾಂಗಣದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಕಿಯರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ, ನಿಗದಿತ ಗುರಿ ಸಾಧಿಸಲು ಸೂಚಿಸಿದರು.ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ‘ಅಕ್ಕ ಪಡೆ’ ಸಿಬ್ಬಂದಿ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಕರ್ನಾಟಕ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಅನುಷ್ಠಾನಗೊಳಿಸುತ್ತಿರುವ ‘ಅಕ್ಕ ಪಡೆ’ ಯೋಜನೆಯು ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಹಾಗೂ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಕಾರ್ಯ ನಿರ್ವಹಿಸುವುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನವೀನಕುಮಾರ, ಜಿಲ್ಲಾ ನಿರೂಪಣಾಧಿಕಾರಿಗಳು, ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಸಂತಪೂರ (ಔರಾದ್) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.--
ಚಿತ್ರ 7ಬಿಡಿಆರ್56ಜಿಲ್ಲೆಯ ಸಖಿ-ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
--