ಕನ್ನಡಪ್ರಭ ವಾರ್ತೆ ಕುಣಿಗಲ್
ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಾಲಯದ ಮುಂದೆ ಜಮಾಯಿಸಿ ಬೃಹದಾಕಾರದ ರಥಕ್ಕೆ ಹಣ್ಣು, ದವನ ಎಸೆಯುವ ಮುಖಾಂತರ ಸಿದ್ದಲಿಂಗೇಶ್ವರರಿಗೆ ಭಕ್ತಿಯ ಪರಕಾಷ್ಠತೆಯನ್ನು ಮೆರೆದರು.
ಇನ್ನೂ ಕೆಲವು ಭಕ್ತರು ಮೆಣಸು, ಉಪ್ಪು ಸೇರಿ ವಿವಿಧ ವಸ್ತುಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು, ರಥೋತ್ಸವದ ಹಿನ್ನೆಲೆಯಲ್ಲಿ ಸಿದ್ದಲಿಂಗೇಶ್ವರರ ದೇವಾಲಯ ಮತ್ತು ಗದ್ದುಗೆಗೆ ಹಲವಾರು ವಿವಿಧ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಸಾಂಪ್ರದಾಯಿಕವಾಗಿ ಮಧ್ಯಾಹ್ನ ಅಭಿಜನ್ ಮುಹೂರ್ತದಲ್ಲಿ ಸಿದ್ದಲಿಂಗೇಶ್ವರರ ವಿಗ್ರಹವನ್ನು ಶ್ರೀ ಸಿದ್ದಲಿಂಗೇಶ್ವರರ ಗದ್ದುಗೆಯಿಂದ ಮೆರವಣಿಗೆಯಲ್ಲಿ ವಿಧಿ ವಿಧಾನದಂತೆ ಶಾಸ್ತ್ರೋಕ್ತವಾಗಿ ಕರೆತಂದು ಶೃಂಗಾರಗೊಂಡ ಆರು ಚಕ್ರಗಳ ತೇರಿನ ಮೇಲೆ ಪ್ರತಿಷ್ಠಾಪಿಸಲಾಯಿತು.
ರಥದ ಗಾಲಿಗಳಿಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬಾಳೆಹೊನ್ನೂರು ಕಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಿದರು,
ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವಾರು ಹರ, ಗುರು, ಚರಮೂರ್ತಿಗಳು ಮತ್ತು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತಹಸೀಲ್ದಾರ್ ರಮೇಶ್ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು,
ಎಡೆಯೂರು ದಾಸೋಹ ಕೈಂಕರ್ಯಾ ಸೇವಾ ಸಮಿತಿಯಿಂದ ಜಾತ್ರೆಗೆ ಬಂದಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.