ಯಕ್ಷಗಾನ ಕಲಾವಿದರಿಗೆ ನಿಘಂಟು, ಸಾಹಿತ್ಯಾಭ್ಯಾಸ ಅಗತ್ಯ: ವಸಂತ ಭಾರದ್ವಾಜ್

KannadaprabhaNewsNetwork | Published : Feb 19, 2024 1:35 AM

ಸಾರಾಂಶ

ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಮಾತನಾಡಿ, ಧ್ವನಿಮುದ್ರಣದೊಂದಿಗೆ ರಂಗಕ್ರಮಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಮೂಲಕ ಯಕ್ಷಗಾನ ಅಭ್ಯಾಸಿಗಳಿಗೆ ಉತ್ತಮ ಮಾರ್ಗದರ್ಶಿ ಕೃತಿಯೊಂದು ದೊರೆತಂತಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಂದಳಿಕೆಯ ಮುದ್ದಣ ಪ್ರಕಾಶನ ಮತ್ತು ಬಲಿಪಗಾನ ಯಾನ ಆಶ್ರಯದಲ್ಲಿ ಮೂಡುಬಿದಿರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಶನಿವಾರ ಮುದ್ದಣ ಕವಿಯ ಸಂಪೂರ್ಣ ‘ಕುಮಾರ ವಿಜಯ’ ಹಾಗೂ ಸಂಪೂರ್ಣ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರಸಂಗಗಳ ಧ್ವನಿಮುದ್ರಣದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಹಿರಿಯ ವಿದ್ವಾಂಸ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಷ್ಟಾವಧಾನಿ ಡಾ. ವಸಂತ ಭಾರದ್ವಾಜ್, ಧ್ವನಿ ಮುದ್ರಣದ ಲೋಕಾರ್ಪಣೆಯೊಂದಿಗೆ ಬಲಿಪ ನಾರಾಯಣ ಭಾಗವತರು ‘ಕುಮಾರ ವಿಜಯ ಪ್ರಸಂಗ’ದ ಧ್ವನಿಮುದ್ರಣಕ್ಕೆ ಬರೆದ ಟಿಪ್ಪಣಿ ಹಾಗೂ ಬಡಗುತಿಟ್ಟಿನ ‘ರತ್ನಾವತಿ ಕಲ್ಯಾಣ’ಕ್ಕೆ ನಿತ್ಯಾನಂದ ಹೆಬ್ಬಾರ್ ಮತ್ತು ಹೆರಂಜಾಲು ಗೋಪಾಲ ಗಾಣಿಗ ಅವರು ಬರೆದ ಟಿಪ್ಪಣಿ ಹಾಗೂ ಧ್ವನಿ ಮುದ್ರಣಕ್ಕೆ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅವರ ನಿರೂಪಣೆಗಳಿರುವ ‘ರತ್ನಾವತಿ ಕಲ್ಯಾಣ-ಕುಮಾರ ವಿಜಯ: ಪ್ರಸಂಗ ನಡೆ-ರಂಗ ತಂತ್ರ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಮುದ್ದಣ ಕವಿಯ ಪ್ರಸಂಗಗಳ ಪದ್ಯಗಳಲ್ಲಿರುವ ಛಂದೋಬದ್ಧತೆ, ಪದಕೌಶಲ್ಯ, ಅಲಂಕಾರ ಸೌಷ್ಠವ ಇವುಗಳನ್ನು ಅರಿತು ಹಾಡಬಲ್ಲ ಭಾಗವತರ ಕೊರತೆ ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ಕಾಣಿಸುತ್ತಲಿದೆ. ಕವಿಯ ಆಶಯ ಏನು ಎಂಬುದನ್ನು ಪರಿಗ್ರಹಿಸದೆ ತಮಗೆ ಇಷ್ಟ ಬಂದಹಾಗೆ ಪದ್ಯಗಳನ್ನು ಹಾಡುತ್ತಿರುವ ಸ್ಥಿತಿ ಇದೆ. ಕಲಾವಿದರೂ ಅಷ್ಟೇ ಆಳವಾದ ಅಧ್ಯಯನ ಇಲ್ಲದೆ ಬಡವಾಗಿದ್ದಾರೆ. ಪದಗಳ ಅರ್ಥ ತಿಳಿಯಲು ನಿಘಂಟು ಬಿಡಿಸಿನೋಡಬೇಕು ಎಂಬುದೇ ತಿಳಿದಿಲ್ಲ. ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳ ಪುಟ ಬಿಡಿಸದವರೇ ಹೆಚ್ಚಿದ್ದಾರೆ ಎಂದು ವಿಷಾದಿಸಿದ ಅವರು, ಕಲಾವಿದರು ವಿನೀತ ಪ್ರಜ್ಞೆ ಬೆಳೆಸಿಕೊಳ್ಳುವ ಜತೆಗೆ ಸಾಹಿತ್ಯಾಭ್ಯಾಸವನ್ನೂ ಮಾಡುತ್ತಿರಬೇಕು ಎಂದು ಕಿವಿಮಾತು ಹೇಳಿದರು.ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಮಾತನಾಡಿ, ಧ್ವನಿಮುದ್ರಣದೊಂದಿಗೆ ರಂಗಕ್ರಮಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಮೂಲಕ ಯಕ್ಷಗಾನ ಅಭ್ಯಾಸಿಗಳಿಗೆ ಉತ್ತಮ ಮಾರ್ಗದರ್ಶಿ ಕೃತಿಯೊಂದು ದೊರೆತಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ, ಚೆಂಡೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ ಕಲ್ಕೂರ ಮಾತನಾಡಿ, ಭಾಷೆ, ಸಂಸ್ಕೃತಿ ಇವೆಲ್ಲ ಕಾಲಗತಿಯಲ್ಲಿ ಮಾರ್ಪಾಡಾಗುತ್ತ ಬಂದಿರುವುದು ಸಹಜ ಪ್ರಕ್ರಿಯೆಯಾದರೂ ಮೂಲ ಮರೆಯಾಗಬಾರದು. ತಾಂತ್ರಿಕ ಬೆಳವಣಿಗೆಗಳೇನಿದ್ದರೂ ಮೂಲ ಆಶಯ, ಸ್ವರೂಪಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.ಉದ್ಯಮಿ ಕೆ. ಶ್ರೀಪತಿ ಭಟ್ ಶುಭಕೋರಿದರು. ಬಲಿಪ ಗಾನ ಮತ್ತು ಧ್ವನಿಮುದ್ರಣ ಲೋಕಾರ್ಪಣೆ ಕಾರ್ಯಕ್ರಮ ಸಂಯೋಜಿಸಿದ ಬಲಿಪ ಗಾನಯಾನ ಸಂಯೋಜಕ ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿದರು. ಮುದ್ದಣ ಕಾವ್ಯಪ್ರಕಾಶನದ ಅಧ್ಯಕ್ಷೆ ವಿಜಯಲಕ್ಷ್ಮೀ ಬಾಲಚಂದ್ರ ಅತಿಥಿಗಳನ್ನು ಗೌರವಿಸಿದರು. ಮುದ್ದಣ ಪ್ರಕಾಶನದ ಕಾರ್ಯದರ್ಶಿ ಸೌಜನ್ಯಾ ನಂದಳಿಕೆ ಪ್ರಸ್ತಾವನೆಗೈದು, ನಿರ್ದೇಶಕ ಬಾಲಚಂದ್ರ ರಾವ್ ನಂದಳಿಕೆ ವಂದಿಸಿದರು.ಪ್ರಾರಂಭದಲ್ಲಿ ಮುದ್ದಣ ಕವಿಯ ಕುಮಾರ ವಿಜಯ ಪ್ರಸಂಗದ ಆಯ್ದ ಪದಗಳನ್ನು ಭಾಗವತ ಶಿವಶಂಕರ ಭಟ್‌ ಮತ್ತು ಪುಂಡಿಕೈ ಗೋಪಾಲಕೃಷ್ಣ ಭಟ್ ‘ಬಲಿಪ ಗಾನ ಯಾನ’ದಲ್ಲಿ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯ (ಮದ್ದಳೆ), ನವೀನ್‌ಚಂದ್ರ ಮೊಗರ್ನಾಡು (ಚೆಂಡೆ) ಮತ್ತು ಅನಂತ ಕೃಷ್ಣ ಅಜ್ಜಕಾನ (ಚಕ್ರತಾಳ) ಸಹಕರಿಸಿದರು.

Share this article