ಉಡುಪಿ: ತಮ್ಮ ಕ್ರಾಂತಿಕಾರಕ ಚತುರ್ಥ ಪರ್ಯಾಯವನ್ನು ವೈಭವಯುತವಾಗಿ, ಯಶಸ್ವಿಯಾಗಿ ಸಮಾಪನಗೊಳಿಸುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪರ್ಯಾಯ ಸ್ವಾಗತ ಸಮಿತಿ ಮತ್ತು ಭಕ್ತಾಭಿಮಾನಿಗಳು ಗುರುವಾರ ರಾಜಾಂಗಣದಲ್ಲಿ ‘ಯತಿಕುಲ ಚಕ್ರವರ್ತಿ’ ಬಿರುದು ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ತಮ್ಮ ಪರ್ಯಾಯಕ್ಕೆ ಸಂಪೂರ್ಣ ಸಹಕಾರ ನೀಡಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ "ಶ್ರೀ ಕೃಷ್ಣಪ್ರಿಯಕೃತಂ " ಪ್ರಶಸ್ತಿಯನ್ನು ಅಭಿನಂದನಾಪೂರ್ವಕವಾಗಿ ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀಗಳು ಕೃಷ್ಣನ ಉತ್ಸವಮೂರ್ತಿಗೆ ಭಗವದ್ಗೀತೆ ಗ್ರಂಥಗಳಿಂದ ತುಲಾಭಾರ ನಡೆಸಿದರು, ಭಕ್ತರು ಪುತ್ತಿಗೆ ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ನಡೆಸಿದರು.ಈ ಸಂದರ್ಭದಲ್ಲಿ ಸಂದೇಶ ನೀಡಿದ ಪುತ್ತಿಗೆ ಶ್ರೀಗಳು, ನಾಹಂ ಕರ್ತಾ, ಹರಿಃ ಕರ್ತಾ ಎಂಬಂತೆ, ತಮ್ಮ ಪರ್ಯಾಯ ಯಶಸ್ವಿಯಾಗಿದ್ದರೆ ಅದನ್ನು ಕೃಷ್ಣನೇ ನಡೆಸಿದ್ದು, ತಾವು ನಿಮಿತ್ತ ಮಾತ್ರ. ಆದ್ದರಿಂದ ಅದರ ಶ್ರೇಯಸ್ಸಿಗೆ ತಾವು ಸನ್ಮಾನ ಪಡೆದರೇ ಶಾಸ್ತ್ರೀಯವಾಗಿ ತಪ್ಪಾಗುತ್ತದೆ, ಆದ್ದರಿಂದ ಮೊದಲು ಕೃಷ್ಣನಿಗೆ ಗೀತೆಯಿಂದಲೇ ತುಲಾಭಾರ ಮಾಡಿಸಿ, ಅಭಿವಂದಿಸುತಿದ್ದೇವೆ ಎಂದರು.
ನಂತರ ಮಂತ್ರಾಲಯ ಮಠದ ವತಿಯಿಂದ ಶ್ರೀಗಳಿಗೆ ಮುತ್ತಿನ ಅಭಿಷೇಕ ನಡೆಸಲಾಯಿತು, ನಂತರ ವಿವಿಧ ಸಂಘಸಂಸ್ಥೆಗಳಿಂದ ಶ್ರೀಗಳಿಗೆ ಅಭಿನಂದನೆ ನಡೆಯಿತು. ಈ ಸಂದರ್ಭದಲ್ಲಿ ವಿದ್ವಾಂಸರು ಗೀತೆಯ ಪುರುಷೋತ್ತಮ ಯೋಗ ಅಧ್ಯಾಯವನ್ನು ಪಾರಾಯಣ ಮಾಡಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಾಹೆ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಶಾಸಕರಾದ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿಗಳಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್, ಶ್ರೀಪತಿ ಭಟ್ ಮೂಡುಬಿದರೆ, ಭುವನೇಂದ್ರ ಕಿದಿಯೂರು, ರಂಜನ್ ಕಲ್ಕೂರ, ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನೇತ್ರತಜ್ಞ ಡಾ. ಕೃಷ್ಣಪ್ರಸಾದ್, ಸುಪ್ರಸಾದ್ ಶೆಟ್ಟಿ ಬೈಕಾಡಿ ಮುಂತಾವರು ಉಪಸ್ಥಿತರಿದ್ದರು.ಮಾಜಿ ಶಾಸಕ ಕೆ.ರಘುಪತಿ ಭಟ್ ಸ್ವಾಗತಿಸಿದರು, ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿದರು, ಪುತ್ತಿಗೆ ಶ್ರೀಗಳ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು. ಜಗತ್ತಿಗೆ ಹಿಂದೂ ಧರ್ಮದ ಮಹತ್ವ ತೋರಿಸಿದ ಶ್ರೀಗಳು: ಸ್ವಾಮಿ ವಿವೇಕಾನಂದರ ನಂತರ ಭಾರತದ ಧ್ವಜವನ್ನು ಜಗತ್ತಿನಾದ್ಯಂತ ಎತ್ತರಕ್ಕೇರಿಸಿದ, ಹಿಂದೂ ಧರ್ಮದ ಮಹತ್ವ ಮತ್ತು ಶಕ್ತಿಯನ್ನು ಜಗತ್ತಿಗೆ ತೋರಿಸಿದ ಕೀರ್ತಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಸಲ್ಲಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಶ್ರೀಪಾದ ಎಸ್ಸೊ ನಾಯಕ್ ಕೊಂಡಾಡಿದರು.ಶ್ರೀಗಳು ಅನುಸರಿಸುತ್ತಿರುವ ಗೀತೆಯ ಭಕ್ತಿ ಮಾರ್ಗದಲ್ಲಿ ನಾವೆಲ್ಲರೂ ನಡೆದರೇ ನಮ್ಮ ದೇಶ ಮಾತ್ರವಲ್ಲ, ಮನುಕುಲವೇ ಉದ್ದಾರವಾಗುತ್ತದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮ ಪೂರ್ವಜನ್ಮದ ಸುಕೃತದ ಫಲ ಎಂದು ಸಂತಸ ವ್ಯಕ್ತಪಡಿಸಿದರು.