ಉಪ ಚುನಾವಣೆ ಸೋಲಿಗೆ ಯತ್ನಾಳ್ ಹರಕು ಬಾಯಿ ಕಾರಣ

KannadaprabhaNewsNetwork |  
Published : Nov 25, 2024, 01:02 AM IST
24ಕೆಡಿವಿಜಿ-ದಾವಣಗೆರೆ ತಾ. ಶಿರಮಗೊಂಡನಹಳ್ಳಿಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ: ವಿಧಾನಸಭೆ 2023ರ ಸಾರ್ವತ್ರಿಕ ಚುನಾವಣೆ, ಈಗಿನ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಬಸವನಗೌಡ ಪಾಟೀಲ ಯತ್ನಾಳ್‌ನ ಹರಕು ಬಾಯಿಯೇ ಕಾರಣ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.

ದಾವಣಗೆರೆ: ವಿಧಾನಸಭೆ 2023ರ ಸಾರ್ವತ್ರಿಕ ಚುನಾವಣೆ, ಈಗಿನ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಬಸವನಗೌಡ ಪಾಟೀಲ ಯತ್ನಾಳ್‌ನ ಹರಕು ಬಾಯಿಯೇ ಕಾರಣ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ, ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್‌ನ ಹರಕು ಬಾಯಿಯೇ ಕಾರಣವಾಗಿದ್ದು, ಇಂತಹವರಿಂದಾಗಿಯೇ ಬಿಜೆಪಿ ಸೋಲನುಭವಿಸಿದೆ ಎಂದರು.

ದಿನ ಬೆಳಗಾದರೆ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುವ ಬಸವನಗೌಡ ಪಾಟೀಲ್ ಯತ್ನಾಳ್‌ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಗೆ ನೇರ ಕಾರಣವಾಗಿದ್ದಾರೆ. ರಾಜ್ಯದ ಜನತೆ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯತ್ನಾಳ್‌ಗೆ ಇದ್ಯಾವುದನ್ನೂ ಸಹಿಸಲಾಗುತ್ತಿಲ್ಲ. ಅದಕ್ಕಾಗಿಯೇ ಬಿಎಸ್‌ವೈ, ಬಿವೈವಿ ವಿರುದ್ಧ ನಿತ್ಯವೂ ಆಕ್ರೋಶ ಹೊರ ಹಾಕುತ್ತಾರೆ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಗಾಳಿ ಇದ್ದರೂ ವಿಜಯೇಂದ್ರ ನಾಯಕತ್ವ ಒಪ್ಪಿರುವ ಜನರು ಬಿಜೆಪಿಗೆ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ವಕ್ಫ್‌ ವಿರುದ್ಧದ ಹೋರಾಟಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ. ಇದೇ ಮೂರು ತಂಡ ಮಾತ್ರ ಅಧಿಕೃತ ಎಂದು ತಿಳಿಸಿದರು. ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಪ್ರವಾಸ ಮಾಡುತ್ತಿದ್ದು, ಇದೇ ಮೂರು ತಂಡಗಳ ಪ್ರವಾಸವೇ ಅಧಿಕೃತ. ಇನ್ಯಾರೇ ಪ್ರವಾಸ ಮಾಡಿದರೂ ಅದು ಅಧಿಕೃತವಲ್ಲ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಯಾವುದೇ ಕಾರಣಕ್ಕೂ ಬಸವನಗೌಡ ಪಾಟೀಲ್ ಯತ್ನಾಲ್‌ಗೆ ಸಪೋರ್ಟ್ ಮಾಡಬಾರದು. ಯತ್ನಾಳ್ ಮತ್ತು ತಂಡದ ವಿರುದ್ಧ ಶೀಘ್ರವೇ ನಾವು ನಮ್ಮ ಪಕ್ಷದ ವರಿಷ್ಠರಿಗೆ ಭೇಟಿ ನೀಡಿ, ಶಿಸ್ತು ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದರು.

ಬಸವನಗೌಡ ಪಾಟೀಲ್ ಯತ್ನಾಳ್‌ ನೇತೃತ್ವದ ತಂಡಕ್ಕೆ, ಯತ್ನಾಳ್ ಮತ್ತಿತರರ ಮಾತಿಗೆ ಯಾರೂ ಬೆಲೆ ಕೊಡಬಾರದು. ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವು ಬದಲಾಗುವುದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯು ಬಿ.ವೈ.ವಿಜಯೇಂದ್ರ ನೇತೃತ್ವದಲ್ಲೇ ಎದುರಿಸುತ್ತೇವೆ. ವಿಜಯೇಂದ್ರ ನೇತೃತ್ವದಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೂ ಬರಲಿದೆ ಎಂದು ಅವರು ತಿಳಿಸಿದರು.

ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ. ಇದೀಗ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ವರ್ಷವಾಯಿತು. ಈ ಅವದಿಯಲ್ಲೇ 17 ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ವಿಜಯೇಂದ್ರ ಸಂಘಟನಾ ಸಾಮರ್ಥ್ಯದಿಂದಲೇ ಅಷ್ಟೂ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಯಡಿಯೂರಪ್ಪನವರು ಸೈಕಲ್ ತುಳಿಯುವಾಗ ಈಗ ಬಿಎಸ್‌ವೈ ವಿರುದ್ಧ ಮಾತನಾಡುತ್ತಿರುವವರು ಆಗ ಕಣ್ಣನ್ನೇ ಬಿಟ್ಟಿರಲಿಲ್ಲ ಎಂದು ಟೀಕಿಸಿದರು.

ನಿಮಗೆ ತಾಕತ್‌ ಇದ್ದರೆ ನನ್ನ ಎದುರಿಗೆ ಬನ್ನಿ. ಕಳೆದ ವಿಧಾನಸಭೆ ಚುನಾವಣೆಗೆ ಈಗ ಟೀಮ್ ಮಾಡಿಕೊಂಡಿರುವ ಬಿಜೆಪಿಯವರೇ ಕಾರಣ. ರಾಜ್ಯದ ಉಸ್ತುವಾರಿಗಳನ್ನು ಟೀಕಿಸುತ್ತಿರುವ ಮಹಮ್ಮದ್ ಬಿನ್‌ ತುಘಲಕ್‌ಗಳು, ಸದ್ದಾಂ ಹುಸೇನ್‌ಗಳು ಉಪ ಚುನಾವಣೆ ಸೋಲಿಗೆ, ಮಾತನಾಡುವ ಹರಕು ಬಾಯಿ, ವಲಸು ಬಾಯಿಯವೇ ಕಾರಣ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನ ಸೋಲಿಗೆ ಯತ್ನಾಳ್ ಕ್ಯಾಂಪ್ ಮಾಡಿದ್ದೇ ಕಾರಣ ಎಂದು ದೂರಿದರು.

ಹಿಂದೂ ಹುಲಿ ಅಂತಾ ಕರೆದುಕೊಳ್ಳುವ ಬಸವನಗೌಡ ಯತ್ನಾಳ್ ಮತ್ತೆ ಯಾಕೆ ಶಿಗ್ಗಾಂವಿ ಸಿಟಿಯಲ್ಲಿ ಬಿಜೆಪಿಗೆ ಓಟು ಕೊಡಿಸಲಿಲ್ಲ? ನಾವು ತಾಳ್ಮೆಯಿಂದಿದ್ದೇವೆ. ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆಯೇ ನಿಮ್ಮಂತಹವರಿಗೆ ಇಲ್ಲ ಎಂದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರೆಲ್ಲಾ ಗೌರವದಿಂದ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. 8-10 ಜನ ಟೀಕಿಸಿದರೆ ಯಡಿಯೂರಪ್ಪನವರ ಮರ್ಯಾದೆ ಹೋಗಲ್ಲ. ಹೋರಿ ಮುಂದೆ ಹೋಗುತ್ತಿದ್ದರೆ, ತೋಳ ಹಿಂದೆ ಕಾಯ್ಕೊಂಡು ಹೋಗುತ್ತಿತ್ತಂತೆ ಹಾಗಾಗಿದೆ. ಬಿಎಸ್‌ವೈಗೆ ಟೀಕಿಸುವವರ ಸ್ಥಿತಿ ಎಂದು ಹೇಳಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು, ಪಾಲಿಕೆ ಸದಸ್ಯ ಕೆ.ಎಂ.ವೀರೇಶ, ಪ್ರವೀಣ ರಾವ್ ಜಾಧವ್‌, ರಾಜು ವೀರಣ್ಣ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿ ಗನ್‌ಮ್ಯಾನ್‌ ಸೇರಿ ಕೈ, ಬಿಜೆಪಿಯ 26 ಜನ ಸೆರೆ
ಮೆಕ್ಕೆಜೋಳಕ್ಕೆ ರಾಜ್ಯದಿಂದ ಸಹಾಯಧನ ಪ್ರಕಟ