ಹಾನಗಲ್ಲ: ಮೇ ೯ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನಸೇವೆಯ ೫೦ ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ಪಟ್ಟಣದ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದಲ್ಲಿ ಜರುಗಿತು.ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ, ಭಾರತೀಯ ಜನತಾ ಪಕ್ಷದ ಸಂಘಟನೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿರುವ ಬಿ.ಎಸ್. ಯಡಿಯೂರಪ್ಪನವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ೫೦ ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಅವರನ್ನು ಅಭಿಮಾನಿಗಳು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಅಭಿನಂದಿಸುವ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಜನತೆಗೆ ಬಿಎಸ್‌ವೈ ಅವರ ಕೊಡುಗೆಗಳು ಮತ್ತು ರೈತಪರವಾದ ಹೋರಾಟಗಳು, ಪಕ್ಷ ಸಂಘಟನೆ ಇಂಥ ಹಲವು ಕಾರ್ಯಗಳನ್ನು ನೆನಪಿಸುವ ಅಭೂತಪೂರ್ವ ಕಾರ್ಯಕ್ರಮ ಇದಾಗಲಿದೆ. ಅವರು ದಾಪುಗಾಲುಗಳನ್ನು ಸ್ಮರಿಸುವ ಅವಕಾಶ ನಮ್ಮೆಲ್ಲರಿಗೂ ಒದಗಿಬಂದಿದೆ. ಇಂಥ ಕ್ಷಣಗಳನ್ನು ರಾಜ್ಯದ ಜನತೆ ಕಣ್ಮುಂಬಿಕೊಳ್ಳಬೇಕಿದೆ. ಅದಕ್ಕಾಗಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆವಹಿಸಿದ್ದ ಭಾರತೀಯ ಜನತಾ ಪಕ್ಷದ ಹಾನಗಲ್ಲ ಮಂಡಲದ ಅಧ್ಯಕ್ಷ ಮಹೇಶ ಕಮಡೊಳ್ಳಿ ಮಾತನಾಡಿ, ತಾಲೂಕಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ೨೫ ಬಸ್‌ಗಳನ್ನು ಹಾಗೂ ೧೦೦ ಕಾರುಗಳನ್ನು ಬಿಎಸ್‌ವೈ ಅಭಿಮಾನೋತ್ಸವಕ್ಕೆ ತೆರಳಲು ಕಾರ್ಯಕರ್ತರಿಗೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಅಭಿಮಾನೋತ್ಸವದ ಯಶಸ್ಸಿಗಾಗಿ ಎಲ್ಲರೂ ಕೈ ಜೋಡಿಸೋಣ ಎಂದು ಕರೆ ನೀಡಿದರು. ಸಭೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ವಿಭಾಗ ಸಹ ಪ್ರಭಾರಿ ಭೋಜರಾಜ ಕರೂದಿ, ಮುಖಂಡರಾದ ಭರತ್ ಬೊಮ್ಮಾಯಿ ಮತ್ತು ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.