ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗುಳಿದ ಯಲಬುರ್ಗಾ

KannadaprabhaNewsNetwork |  
Published : Aug 29, 2026, 01:30 AM IST
ಸಸಸಸ | Kannada Prabha

ಸಾರಾಂಶ

ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಿತ್ತನೆಗೊಂಡ ನಾನಾ ಬೆಳೆಗಳು ಬೆಳೆಯುವ ಹಂತದಲ್ಲಿಯೇ ಒಣಗಿ ಹೋಗಿವೆ. ಇನ್ನೂ ಕೆಲ ಕಡೆ ರೈತರು ಬೆಳೆಗಳನ್ನು ಜಾನುವಾರು ಮತ್ತು ಕುರಿ ಮೇಯಿಸಿದ್ದಾರೆ.

ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ

ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ೧೦೧ ಬರಪೀಡಿತ ತಾಲೂಕುಗಳ ಪಟ್ಟಿ ಪ್ರಕಟಿಸಿದ್ದು, ಪಟ್ಟಿಯಿಂದ ಯಲಬುರ್ಗಾ ತಾಲೂಕು ಹೊರಗುಳಿದಿರುವುದು ರೈತರು ಮತ್ತು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಹಾಗೂ ಯಲಬುರ್ಗಾ ವಿಧಾನಸಭಾ ವ್ಯಾಪ್ತಿಯ ಕುಕನೂರು ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸತತ ಮಳೆ ಕೊರತೆಯಿಂದ ಒಣಗಿರುವ ಬೆಳೆ, ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಮೇಯಲು ಹಸಿ ಮೇವಿನ ಕೊರತೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಬೀರಿದ ಪ್ರಭಾವದಿಂದ ರೈತ ಸಮೂಹ ಸಂಕಷ್ಟ ಎದುರಿಸುವಂತಾಗಿದೆ. ಬರದ ಛಾಯೆ ಆವರಿಸಿ ಇಷ್ಟೊಂದು ತೊಂದರೆ ಎದುರಿಸುತ್ತಿರುವ ಯಲಬುರ್ಗಾ ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಯಿಂದ ಹೊರಗುಳಿದಿದೆ. ವಿಪರ್ಯಾಸವೆಂದರೆ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಕುಕನೂರನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಿ, ಯಲಬುರ್ಗಾ ಕೈಬಿಡಲಾಗಿದೆ. ಹೀಗಾಗಿ ಒಂದೇ ವಿಧಾನ ಸಭಾ ಕ್ಷೇತ್ರದ ಕುಕನೂರಲ್ಲಿ ಬರ! ಯಲಬುರ್ಗಾ ತಾಲೂಕಿನಲ್ಲಿ ಬರ ಇಲ್ಲವೇನು? ಎಂಬ ಪ್ರಶ್ನೆ ರೈತರು, ಸಾರ್ವಜನಿಕರದ್ದಾಗಿದೆ.

ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಿತ್ತನೆಗೊಂಡ ನಾನಾ ಬೆಳೆಗಳು ಬೆಳೆಯುವ ಹಂತದಲ್ಲಿಯೇ ಒಣಗಿ ಹೋಗಿವೆ. ಇನ್ನೂ ಕೆಲ ಕಡೆ ರೈತರು ಬೆಳೆಗಳನ್ನು ಜಾನುವಾರು ಮತ್ತು ಕುರಿ ಮೇಯಿಸಿದ್ದಾರೆ. ಇಂತಹ ವಾಸ್ತವ ಪರಿಸ್ಥಿತಿಯ ನಡುವೆಯೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಯಲಬುರ್ಗಾ ಹೊರಗಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಮಳೆ ಪ್ರಮಾಣ, ಬೆಳೆ ಹಾನಿ ಹಾಗೂ ಕೃಷಿ ಪರಿಸ್ಥಿತಿಯ ಸಮಗ್ರ ವಾಸ್ತವಾಂಶ ಪರಿಗಣಿಸಿ ಯಲಬುರ್ಗಾವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯ ರೈತರಿಂದ ಕೇಳಿ ಬಂದಿದೆ.

ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಸ್ಪಷ್ಟೀಕರಣ ನೀಡಿ: ರಾಜಶೇಖರ

ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕೇವಲ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಇರುವುದನ್ನು ಕರವೇ ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಖಂಡಿಸಿದ್ದಾರೆ. ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಯಲಬುರ್ಗಾ ಹೊರಗುಳಿದಿರುವ ಬಗ್ಗೆ ತಹಸೀಲ್ದಾರ್ ಸ್ಪಷ್ಟೀಕರಣ ನೀಡಬೇಕು. ಕೂಡಲೇ ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿದ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಲಬುರ್ಗಾ-ಕುಕನೂರು ತಾಲೂಕುಗಳು ಬೇರೆ ಬೇರೆಯಲ್ಲ. ಯಲಬುರ್ಗಾ ತಾಲೂಕನ್ನು ಯಾವ ಕಾರಣಕ್ಕಾಗಿ ಬರಪೀಡಿತ ಪಟ್ಟಿಯಿಂದ ದೂರ ಉಳಿಸಿದ್ದಾರೆ ಎಂಬುದು ಅಚ್ಚರಿಯಾಗಿದೆ. ಮುಂಗಾರು ಕೊರತೆಯಿಂದ ಬಿತ್ತಿದ ಬೆಳೆಗಳು ಹಾನಿಯಾಗಿ, ಭೀಕರ ಬರಗಾಲ ಆವರಿಸಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಅದೇಗೆ ಮಾಹಿತಿ ನೀಡಿದರೋ ತಿಳಿಯುತ್ತಿಲ್ಲ. ಮೊದಲ ಪಟ್ಟಯಲ್ಲಿಯೇ ಕುಕನೂರು ಜತೆಗೆ ಯಲಬುರ್ಗಾ ಇರಬೇಕಿತ್ತು. ರಾಜ್ಯ ಸರ್ಕಾರ ಕೇವಲ ರಾಜಕೀಯ ಹಸ್ತಾಂತರದಲ್ಲಿಯೇ ಕಾಲ ಕಳೆಯುತ್ತಿದೆ ಹೊರತು ಜನರ ಕಷ್ಟ ಅರಿಯುತ್ತಿಲ್ಲ. ಕೂಡಲೇ ಯಲಬುರ್ಗಾವನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ಇನ್ನೂ ೧೫ ದಿನಗಳ ಒಳಗಾಗಿ ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗುವುದು. ಶೀಘ್ರದಲ್ಲೇ ಬರಪೀಡಿತ ಪ್ರದೇಶಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲಿದೆ: ಭೀಮಣ್ಣ ನಾಯ್ಕ
ಚಿಂತಕರ ವಿಚಾರಧಾರೆ ಇಂದಿಗೂ ಪ್ರಸ್ತುತ: ಉಮೇಶ