- ಚಿಕ್ಕಮಗಳೂರು ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣ
ಪೌರ ಕಾರ್ಮಿಕರ ಆರೋಗ್ಯ ಮಾನಸಿಕವಾಗಿ ಸದೃಢವಾಗಲು ದಿನದ ಒಂದು ಗಂಟೆ ಯೋಗಾಭ್ಯಾಸದ ತರಬೇತಿ ನೀಡುವ ಅಗತ್ಯ ಇದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಶನಿವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರು ದುಶ್ಚಟಗಳಾದ ಮಾದಕ ವ್ಯಸನಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಪೌರ ಕಾರ್ಮಿಕರು ಆರೋಗ್ಯವಾಗಿದ್ದಾಗ ಮಾತ್ರ ಎಲ್ಲಾ ನಾಗರಿಕರು ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.ಕೆಲವು ಪೌರ ಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿರುವ ಮಾದರಿಯಲ್ಲಿ ನೀರುಗಂಟಿಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಕಾಯಂಗೊಳಿಸುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಯಕ ಸಂಸ್ಕೃತಿಗೆ ಗೌರವ ಕೋಡುವ ಉದ್ದೇಶವೇ ಪೌರ ಕಾರ್ಮಿಕ ದಿನಾಚರಣೆ. ಸ್ವಚ್ಛ ಕಾಯಕ ಮಾಡುವ ಪೌರ ಕಾರ್ಮಿಕರನ್ನು ಗೌರವದಿಂದ ಕಂಡಾಗ ಮಾತ್ರ ಸಮಾನತೆ, ಆರೋಗ್ಯ ಲಭಿಸುತ್ತದೆ ಎಂದು ಹೇಳಿದರು.
74 ಮನೆಗಳಲ್ಲಿ 24 ಬಾಕಿ ಇದ್ದು, ಉಳಿದ ಕಾರ್ಮಿಕರಿಗೂ ಮನೆಗಳನ್ನು ನಿರ್ಮಿಸಿಕೊಡಬೇಕು. 35 ನೌಕರರು ಕಾಯಂ ಮಾಡಿದ್ದು, ಉಳಿದವರನ್ನು ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೂಡಲೇ ಇದನ್ನು ನಿವಾರಿಸಿ ಕಾಯಂಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಮಾಜಿ ಅಧ್ಯಕ್ಷರಾದ ಕವಿತಾ ಶೇಖರ್ ಮಾತನಾಡಿದರು.
-- ಬಾಕ್ಸ್--
ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಆವರಣದಿಂದ ಡಾ. ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ಭಾವಚಿತ್ರದೊಂದಿಗೆ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ಹೊರಟ ಪೌರ ಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿ ಎಂ.ಜಿ ರಸ್ತೆ ಮೂಲಕ ಸಾಗಿ ನಗರಸಭೆ ಆವರಣವನ್ನು ತಲುಪಿದರು. 18 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಪೌರಾಯುಕ್ತ ಬಸವರಾಜ್ ಹಾಗೂ ಸದಸ್ಯರು ಇದ್ದರು.