ಯೋಗದ ಪ್ರತಿ ಆಸನಗಳನ್ನು ಬೇರೆ ಬೇರೆ ಕೆಲಸದ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ಮಾಡುತ್ತಿರುತ್ತೇವೆ
ಕನ್ನಡಪ್ರಭ ವಾರ್ತೆ ಮೈಸೂರು
ಯೋಗ ಎಂಬುದು ತೀರ ಕ್ಲಿಷ್ಟಕರ ಅನ್ನುವಂತಿಲ್ಲ. ಅದೊಂದು ದಿನ ನಿತ್ಯದ ಚಟುವಟಿಕೆಗಳ ದೈಹಿಕ ಶ್ರಮ ಮತ್ತು ಕ್ರಿಯೆ. ಯೋಗ ಎಂಬುದು ಸಾಮಾನ್ಯ ಜ್ಞಾನ ಎಂದು ಜಿಎಸ್‌ಎಸ್ ಯೋಗ ಸಂಸ್ಥೆ ಶ್ರೀಹರಿ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂನ ಶಾರದ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಯೋಗೋತ್ಸವ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗದ ಪ್ರತಿ ಆಸನಗಳನ್ನು ಬೇರೆ ಬೇರೆ ಕೆಲಸದ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ಮಾಡುತ್ತಿರುತ್ತೇವೆ ಎಂದರು.ಬದುಕು ಹಾಗೂ ನಿತ್ಯದ ಚಟುವಟಿಕೆಗಳ ಒತ್ತಡದಲ್ಲಿ ಯೋಗ ಅತ್ಯವಶ್ಯಕವಾದದ್ದು. ಒಬ್ಬ ಸಾಮಾನ್ಯ ವ್ಯಕ್ತಿ 18 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಸಾಧ್ಯವೇ? ಆದರೆ, ಒಬ್ಬ ಯೋಗಪಟುವಿಗೆ ಅದು ಸಾಮಾನ್ಯದ ಕೆಲಸ. ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೆಚ್ಚು ಕಾಲ ಕಾರ್ಯ ನಿರತನಾಗಿರಲು ಯೋಗ ಬೇಕೇಬೇಕು. ಯಾರಿಗೆ ಒಂದು ಗಂಟೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವೋ ಅದು ಸಹ ಯೋಗ ಎಂದು ಅವರು ಹೇಳಿದರು.ಪ್ರಾಣಯಾಮ ಎಂಬುದು ಒಂದು ಶಕ್ತಿ. ಅದು ವಿವಿಧ ರೂಪಗಳಲ್ಲಿದ್ದು, ದೇಹದಲ್ಲಿರುವ ಶಕ್ತಿಯನ್ನು ಹೊರಹಾಕುವ ಪ್ರಕ್ರಿಯೆ, ಆಹಾರದ ಬಳಕೆಯ ಬಗೆಗಿನ ವಿವೇಚನೆಯೂ ಪ್ರಾಣಯಾಮ. ಹದವಾದ ಉಷ್ಣಾಂಶವಿದ್ದಲ್ಲಿ ಮಾತ್ರ ಜೀವಿ ಹುಟ್ಟುತ್ತದೆ. ಅಂತೆಯೇ ನಮ್ಮ ದೇಹವನ್ನು ಸಮ ಪ್ರಮಾಣದ ಉಷ್ಣಾಂಶ ಕಾಪಾಡಿಕೊಳ್ಳಬೇಕು ಎಂದರು.ಯಾರು ಸಾಧಕರಾಗ ಬಯಸುತ್ತಾರೋ, ಅವರು 18 ಗಂಟೆಗಳ ಕಾಲ ಕೆಲಸ ಮಾಡಬೇಕು. ಹೀಗಾಗಿ ದೈಹಿಕ, ಮಾನಸಿಕವಾಗಿ ಧೃಡವಾಗಿರುವುದು ಮುಖ್ಯ. ಯಾವುದೇ ಕ್ಷೇತ್ರದಲ್ಲಿ ಬೆಳೆಯಲು ಯೋಗ ಅತ್ಯಗತ್ಯ. ಪ್ರತಿ ಕೆಲಸ, ಚಟುವಟಿಗಳಲ್ಲಿ ಆಯಾಸ, ಬೇಸರವಿರುತ್ತದೆ. ಆದರೆ, ಯೋಗದಲ್ಲಿ ಅದೆಂದಿಗೂ ಕಾಣಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.ಮೈಸೂರು ಯೋಗಾಲಯ ರಂಗನಾಥ್ ಅವರು ವಿದ್ಯಾರ್ಥಿಗಳಿಗೆ ಹಲವು ಪ್ರಕಾರದ ಯೋಗದ ಆಸನಗಳನ್ನು ಪ್ರದರ್ಶಿಸಿದರು. ಕಾಲೇಜಿನ 100 ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ, ಹಲವು ರೀತಿ ಯೋಗಾಸನಗಳನ್ನು ಮಾಡಿದರು.ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ, ಶಾರದ ವಿಲಾಸ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಶಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.