ರೋಣ: "ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ, ಹಾಲುಮತದ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ, ಬದಲಾವಣೆ ಅಷ್ಟು ಸುಲಭವಲ್ಲ, ಅವರಾಗೇ ಒಲ್ಲೆ ಅಂತ ಬಿಟ್ರೆ ಇನ್ನೊಬ್ಬರಿಗೆ ಅಧಿಕಾರ ಹೋಗತೈತಿ.. "
ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ಭಾನುವಾರ ರಾತ್ರಿ ಅಲೈದೇವರ ವಾಣಿಯಾಗಿದ್ದು, ಈ ಕುರಿತು ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಮಾಡುವದು ಅಸಾಧ್ಯ ಎಂಬರ್ಥದಲ್ಲಿ ಅರ್ಥೈಸಲಾಗುತ್ತಿದೆ.ಏನಿದು ಅಲೈ ದೈವರ ವಾಣಿ:ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಆಚರಣೆ ವೇಳೆ ಅಲೈ ದೇವರ ವಾಣಿ ನುಡಿದಿದ್ದು, "ನದಿ ಒಳಗೆ ಈಜು ಬರುವ ಭೂಪಬೇಕು. ಅಂದಾಗ ಮಾತ್ರ ಅಧಿಕಾರ ಬದಲಾವಣೆ ಆಗುತ್ತೆ. ಇಲ್ಲಾಂದ್ರೆ ಇಲ್ಲ " ಎಂದು ಅಲೈ ದೇವರು ನುಡಿದಿದ್ದು, ಸಿದ್ದರಾಮಯ್ಯನವರ ಕುರ್ಚಿ ಭದ್ರವಾಗಿದೆ ಎಂಬ ಸಂದೇಶವನ್ನು ದೇವರು ನೀಡಿದೆ ಎಂದು ಅರ್ಥೈಸಲಾಗುತ್ತಿದೆ. "ಮದ್ದು ಇಲ್ಲದ ವ್ಯಾದಿ ಬರುತೈತಿ. ಅದು ಗಾಳಿ ಮುಖಾಂತರ ಹರಡತೈತಿ. ಸಾಕಷ್ಟು ಸಾವು ನೋವುಗಳು ಆಗುತ್ತವೆ. ಅದು ಭೂಮಿ ಮೇಲೆ ಐದು ವರ್ಷ ಇರುತೈತಿ. ಎಚ್ಚರಿಕೆಯಿಂದ ಇರಬೇಕು. ಸಾಮಾನ್ಯರಿಗೆ ಮಾತ್ರ ರೋಗ ಅಲ್ಲ. ಆಳುವ ದೊರೆಗಳಿಗೂ ಭಯಂಕರ ರೋಗ ಕಾಡುತ್ತೆ. ಎಚ್ಚರಿಕೆ ಹೆಜ್ಜೆ ಇಡಿರಿ. ನಾನು ನಾನು ಅಂತ ಮೆರಿಬ್ಯಾಡ್ರಿ. ವಾಹನ ತಗೊಂಡು ಹೋಗುವರು ತಂದೆ-ತಾಯಿ ಬೇಡ ಅಂದ್ರೆ ಬಿಟ್ಟು ಬಿಡ್ರಿ. ದೇವರ ಆಜ್ಞೆ ಮೀರಿದ್ರೆ ಬಲಿಯಾಗ್ತೀರಿ. ಹೋಗಿದ್ದೆ ಖರೆಯಾದ್ರೆ ಹಾದಿಗೊಂದು ಹೆಣ. ಬೀದಿಗೊಂದು ಹೆಣ ಆಕೈತಿ " ಎಂದು ಅಲೈ ದೈವ ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ಗ್ರಾಮದ ಮಸೀದಿ ಎದುರು ನೆರೆದ ಸಾವಿರಾರು ಜನರ ಮಧ್ಯ ಅಚ್ಚರಿಯ ರೀತಿಯಲ್ಲಿ ಕಾರಣಿಕ ನುಡಿದಿದೆ.